ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ನಾಯಕಿ ಸುಪ್ರಿಯಾ ಸುಳೆ ತಮ್ಮ ವಾಟ್ಸಪ್ ಖಾತೆಯನ್ನು ಹ್ಯಾಕ್ ಮಾಡಿರುವ ಹ್ಯಾಕರ್, ೪೦೦ ಡಾಲರ್‌ಗೆ ಬೇಡಿಕೆ ಇಡುವ ಮೂಲಕ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಎನ್‌ಸಿಪಿಯ ಪ್ರಧಾನ ಕಾರ್ಯದರ್ಶಿ ಅದಿತಿ ನಲವಾಡೆ ಅವರ ವಾಟ್ಸಪ್ ಕೂಡಾ ಹ್ಯಾಕ್ ಆಗಿದೆ. ಆಕೆಯಿಂದಲೂ ಹತ್ತು ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ನಾವು ಹ್ಯಾಕರ್ ಜೊತೆ ನಿರಂತರ ಸಂಪರ್ಕದಲ್ಲಿರಲು ಪ್ರಯತ್ನಿಸಿದ್ದೇವೆ. ಹೀಗಾಗಿ ಹ್ಯಾಕರ್‌ಗಳು ಹಣ ಪಾವತಿಗೆ ತಮ್ಮ ಬ್ಯಾಂಕ್ ಬಗೆಗಿನ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಸುಳೆ ವಿವರಿಸಿದ್ದಾರೆ. ಬಾರಮತಿಯ ಸಂಸದೆಯಾಗಿರುವ ಸುಳೆ ತಮ್ಮ ಪೋನ್ ಹಾಗೂ ವಾಟ್ಸಪ್ ಹ್ಯಾಕ್ ಆದ ಕೂಡಲೇ ತಮ್ಮ ಪೋನ್‌ಗೆ ಕರೆ ಅಥವಾ ಸಂದೇಶ ಕಳುಹಿಸದಂತೆ ತುರ್ತಾಗಿ ಮನವಿ ಮಾಡಿಕೊಂಡಿದ್ದರು. ಹಾಗೆಯೇ ಪುಣೆಯ ಪುರಿ ಪೊಲೀಸ್ ಠಾಣೆಗೂ ಸಂಪರ್ಕಿಸಿ ದೂರು ಕೊಟ್ಟಿದ್ದರು. ಆದರೆ ಕೆಲವೇ ತಾಸುಗಳೊಳಗೆ ವಾಟ್ಸಪ್ ತಂಡದ ಬೆಂಬಲದಿಂದಾಗಿ ಸುಳೆಯವರ ವಾಟ್ಸಪ್ ಪುನರಾರಂಭಗೊಂಡಿದೆ.
