Home ಅಪರಾಧ ಸಿಲೆಂಡರ್ ಸ್ಫೋಟ: ಅಯ್ಯಪ್ಪ ಮಾಲಾಧಾರಿಗಳು ಗಂಭೀರ

ಸಿಲೆಂಡರ್ ಸ್ಫೋಟ: ಅಯ್ಯಪ್ಪ ಮಾಲಾಧಾರಿಗಳು ಗಂಭೀರ

0

ಗಾಯಗೊಂಡ ಮಾಲಾಧಾರಿಗಳನ್ನು ಕೆಎಂಸಿ-ಆರ್‌ಐಗೆ ದಾಖಲಿಸಲಾಗಿದೆ

ಹುಬ್ಬಳ್ಳಿ: ಇಲ್ಲಿನ ಸಾಯಿನಗರದ ಅಚ್ಚವ್ವನ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ ಅಡುಗೆ ಅನಿಲದ ಸಿಲೆಂಡರ್ ಸ್ಫೋಟಗೊಂಡ ಪರಿಣಾಮ, 9 ಅಯ್ಯಪ್ಪ ಮಾಲಾಧಾರಿಗಳು ತೀವ್ರ ಗಾಯಗೊಂಡಿದ್ದು ಕೆಎಂಸಿ ಆರ್ ಐ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರವಿವಾರ ತಡರಾತ್ರಿ 1.30ರ ವೇಳೆ ಘಟನೆ ನಡೆದಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.
ಗಾಯಗೊಂಡ ಮಾಲಾಧಾರಿಗಳನ್ನು ಕೆಎಂಸಿ-ಆರ್‌ಐಗೆ ದಾಖಲಿಸಲಾಗಿದೆ. ಬಹುತೇಕ ಎಲ್ಲರ ದೇಹ ಶೇ 50 ರಷ್ಟು ಸುಟ್ಟಿದ್ದು, 58 ವರ್ಷದ ಅಜ್ಜಾಸ್ವಾಮಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಜು ಹರ್ಲಾಪುರ(21), ಸಂಜಯ ಸವದತ್ತಿ(20), ವಿನಾಯಕ ಬಾತಕೇರ(12), ಪ್ರಕಾಶ ಬಾತಕೇರ(42), ಮಂಜು ತೋರದ(22), ಅಜ್ಜಾಸ್ವಾಮಿ(58), ಪ್ರವೀಣ ಚಲವಾದಿ(24), ತೇಜಸ್ ರೆಡ್ಡಿ(26) ಮತ್ತು ಶಂಕರ ರಾಯನಗೌಡ್ರ(29) ಗಾಯಗೊಂಡವರು. ಇವರೆಲ್ಲ ಸಾಯಿನಗರದ ನಿವಾಸಿಗಳು.
ಅಯ್ಯಪ್ಪ ಮಾಲೆ ಧರಿಸಿ ವೃತ ಅಚರಿಸುತ್ತಿದ್ದ ಇವರು, ಈಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ರಾತ್ರಿ ಮಲಗಿದ್ದಾಗ ಮಾಲಾಧಾರಿಯೊಬ್ಬರ ಕಾಲು ಸಿಲೆಂಡರ್‌ಗೆ ತಾಗಿ ಉರುಳಿದೆ. ಪರಿಣಾಮ ರೆಗ್ಯೂಲೇಟರ್ ಸಡಿಲಗೊಂಡು ಗ್ಯಾಸ್ ಸೋರಿಕೆಯಾಗಿ, ದೇವಸ್ಥಾನದಲ್ಲಿ ಹಚ್ಚಿದ್ದ ದೀಪಕ್ಕೆ ತಗುಲಿದೆ. ಆಗ ಒಮ್ಮೆಲೆ‌ ದೇವಸ್ಥಾನದ ಪ್ರಾಂಗಣದಲ್ಲಿ ಬೆಂಕಿಹೊತ್ತುಕೊಂಡು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version