ಬೆಳಗಾವಿ(ರಾಮದುರ್ಗ): ತಾಲೂಕಿನಾದ್ಯಂತ ಬುಧವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಸಿಡಿಲು ಬಡಿದು ಕುರಿಗಾಯಿ ವ್ಯಕ್ತಿ ಸಾವನ್ನಪ್ಪಿದ್ದಾನೆ.
ತಾಲೂಕಿನ ಕೆ.ಚಂದರಗಿ ಗ್ರಾಮದಲ್ಲಿ ಬುಧವಾರ ಸಂಜೆ ದುರ್ಘಟನೆ ನಡೆದಿದ್ದು, ಹೊಲದಲ್ಲಿ ಕುರಿ ಕಾಯುತ್ತಿದ್ದ ನಿಂಗನಗೌಡ ಹನಮಂತಗೌಡ ಪಾಟೀಲ(34) ಸಿಡಿಲು ಬಡಿದು ಸಾವನ್ನಪ್ಪಿದ ದುರ್ದೈವಿ.
ತಾಲೂಕಿನ ಕೆಲವು ಭಾಗದಲ್ಲಿ ಕಳೆದ ಎರಡು ಮೂರು ದಿನಗಳಿಂದ ಸಂಜೆ ವೇಳೆಗೆ ಬಿರುಗಾಳಿ ಸಹಿತ ಮಳೆ ಸುರಿದು ಹಲವು ಅವಾಂತರಗಳಿಗೆ ಕಾರಣವಾಗಿದ್ದು, ಇಂದು ಕುರಿ ಕಾಯುತ್ತಿದ್ದ ವ್ಯಕ್ತಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಂಗಳವಾರ ಸಂಜೆ ಬಿರುಗಾಳಿ ಮಳೆಗೆ ದೊಡ್ಡ ಗಾತ್ರದ ಮರಗಳು, ಶಾಲೆಯ ತಗಡಿನ ಮೇಲ್ಚಾವಣೆ ಹಾಗೂ ಮದುವೆ ಸಮಾರಂಭಗಳಿಗೆ ಹಾಕಿದ ಶಾಮಿಯಾನ ಹಾರಿಹೋಗಿವೆ.