ಬೆಳಗಾವಿ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ ನಗರದ ಲೋಳಸೂರ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ಬುಧವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮುಳುಗಡೆಯಾಗಿರುವ ಸೇತುವೆಗಳ ಸಮೀಕ್ಷೆ ನಡೆಸಿ ಹೊಸ ಸೇತುವೆ ನಿರ್ಮಾಣಕ್ಕೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ನದಿ ತೀರದ ಗ್ರಾಮಗಳಲ್ಲಿ ಮುಳುಗಡೆ ಪ್ರದೇಶದ ಜನರನ್ನು ಸ್ಥಳಾಂತರಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಕೊಯ್ನಾ ಜಲಾಶಯ ಮತ್ತು ಪಂಚಗಂಗಾ ನದಿಯಿಂದ 12 ಸಾವಿರ ಕ್ಯೂಸೆಕ್ ನೀರು ಸಂಗ್ರಹಣೆಯಾಗಿ ಹರಿಯುತ್ತಿದೆ. ಅಲ್ಲಿಂದ ದೂಧಗಂಗಾ-ವೇದಗಂಗಾ ಜೋಡಣೆಯಾಗಿ 1 ಲಕ್ಷ 48 ಸಾವಿರ ಕ್ಯೂಸೆಕ್ ನೀರು ಕೃಷ್ಣ ನದಿಗೆ ಬಂದಿದೆ.
ಸದ್ಯಕ್ಕೆ ಹಿಪ್ಪರಗಿ ಬ್ಯಾರೇಜ್ ಹತ್ತಿರ 1 ಲಕ್ಷ 12 ಸಾವಿರ ಕ್ಯೂಸೆಕ್ ನೀರು ಹರಿದು ಆಲಮಟ್ಟಿ ಜಲಾಶಯ ಸೇರಲಿದ್ದು ಈಗಾಗಲೇ ಮುಖ್ಯ ಇಂಜಿನಿಯರ್‌ಗೆ ಮಾಹಿತಿ ನೀಡಲಾಗಿದೆ. ಆಲಮಟ್ಟಿ ಜಲಾಶಯದಿಂದ ಹೆಚ್ಚು ಸಂಗ್ರಹಣೆಯಾದ ನೀರನ್ನು ಈಗಾಗಲೇ ಬಿಡಗುಡೆ ಮಾಡಲಾಗುತ್ತಿದೆ. ಹಿಡಕಲ್ ಜಲಾಶಯದಿಂದ 36 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ರೈತರಿಗೆ ತೊಂದರೆಯಾಗಿದಂತೆ ಹಂತ ಹಂತವಾಗಿ ಮುನ್ನೆಚ್ಚರಿಕೆ ವಹಿಸಿಕೊಂಡು ನೀರು ಬಿಡುಗಡೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತಕ್ಷಣ ಪರಿಹಾರಕ್ಕೆ ಸೂಚನೆ: ನದಿ ಬದಿಯಲ್ಲಿರುವ ರೈತರು ಎಚ್ಚರಿಕೆಯಿಂದ ಇರಬೇಕು. ಗೋಕಾಕ್‌ನಲ್ಲಿ ಶಿಥಿಲಾವಸ್ಥೆಯಲ್ಲಿರುವ ಮನೆ ಬಿದ್ದು 57 ವರ್ಷದ ಮಹಿಳೆ ಮೃತರಾಗಿದ್ದು ಸ್ಥಳೀಯ ಶಾಸಕರ ಗಮನಕ್ಕೆ ತಂದು ಜಿಲ್ಲಾಡಳಿತದಿಂದ ತಕ್ಷಣವೇ ಪರಿಹಾರ ಬಿಡುಗಡೆ ತಿಳಿಸಲಾಗಿದೆ. ಮೃತ ಮಹಿಳೆಯ ಸಂಬಂಧಿಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಪತ್ತು ನಿರ್ವಹಣಾ ಪಾಧಿಕಾರದ ವತಿಯಿಂದ ಪರಿಹಾರ ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎಸ್.ಡಿ.ಆರ್.ಎಫ್-ಎನ್.ಡಿ.ಆರ್.ಎಫ್ ತಂಡಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಈಗಾಗಲೇ ಎಲ್ಲ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಲೋಳಸೂರ ಸೇತುವೆ ಮುಳುಗಡೆಯ ನೀರಿನ ಪ್ರಮಾಣದಿಂದ ಗೋಕಾಕ್‌ನಲ್ಲಿ ಸರಿಸುಮಾರು 200 ಮನೆಗಳಿಗೆ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪರಿಹಾರ ಕೇಂದ್ರಕ್ಕೆ ಬರುವವರನ್ನು ಸ್ಥಳಾಂತರಿಸಿ, ನಿಯೋಜಿತ ಅಧಿಕಾರಿಗಳು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆ. ಕೃಷ್ಣ ನದಿ 1.5 ಲಕ್ಷ ಕ್ಯೂಸೆಕ್ ನೀರು ಪ್ರಮಾಣ ದಾಟಿದ ನಂತರ ಪ್ರವಾಹ ಎದುರಾಗುವ ಸಂಭವವಿದೆ. ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ ವ್ಯಾಪ್ತಿಯ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಹೇಳಿದರು.
ಒಟ್ಟು ಜಿಲ್ಲೆಯಲ್ಲಿ 550 ಕೇಂದ್ರಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಅದರಲ್ಲಿ 63 ಕೇಂದ್ರಗಳ ಅವಶ್ಯಕತೆ ಬರಬಹುದು. ಆದರೆ ಈಗ ಸದ್ಯಕ್ಕೆ ಗೋಕಾಕ ಮತ್ತು ನಿಪ್ಪಾಣಿಯಲ್ಲಿ ಮಾತ್ರ 2 ಕಾಳಜಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದರು.
ಕಾಳಜಿ ಕೇಂದ್ರಕ್ಕೆ ಭೇಟಿ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಕುಡಿಯುವ ನೀರು, ಆಹಾರ, ವಸತಿ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಒದಗಿಸಿರುವ ಕುರಿತು ಪರಿಶೀಲಿಸಿ, ಶಾಶ್ವತ ಮನೆ ಇಲ್ಲದ ನೆರೆಯ ಸಂತ್ರಸ್ತರಿಗೆ ಮನೆ ಮಂಜೂರು ಮಾಡಿ ಕೊಡುವುದಾಗಿ ಭರವಸೆ ನೀಡಿದರು.
“ಮುಳುಗಡೆಯಾಗಿರುವ ಲೋಳಸೂರು ಸೇತುವೆ ಮೇಲೆ ಜನರು ಸಂಚರಿಸಿದಂತೆ ಬ್ಯಾರಿಕೇಡ್ ಹಾಕಿ ತಹಶೀಲ್ದಾರ್ ಅವರಿಂದ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾದರೂ ಸಹ ಮುಂಜಾಗೃತಿಯಿಂದ 2 ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ” ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದ್ದಾರೆ.