Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ: ಸೆಪ್ಟೆಂಬರ್‌ನಿಂದ ಗೋಕಾಕ್ ಇಂಜಿನಿಯರಿಂಗ್ ಕಾಲೇಜು ಆರಂಭ

ಬೆಳಗಾವಿ: ಸೆಪ್ಟೆಂಬರ್‌ನಿಂದ ಗೋಕಾಕ್ ಇಂಜಿನಿಯರಿಂಗ್ ಕಾಲೇಜು ಆರಂಭ

0

ಬೆಳಗಾವಿ ಜಿಲ್ಲೆಯ ಗೋಕಾಕ ನಗರಕ್ಕೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಬೇಕು ಎಂಬ ಎರಡು ದಶಕಗಳ ಕನಸು ನನಸಾಗಿದೆ. ದಶಕಗಳ ಕನಸು ನನಸಾಗಿದ್ದು ನಗರದ ಸತೀಶ್ ಶುಗರ್ಸ ಅಕಾಡಮಿ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಘಟಕ ಕಾಲೇಜು ಕಾರ್ಯಾರಂಭ ಮಾಡಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಮಂಗಳವಾರದಂದು ನಗರದ ಸತೀಶ್ ಶುಗರ್ಸ ಅಕ್ಯಾಡಮಿ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭವಾಗುತ್ತಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ಕೋರ್ಸ್‌ಗಳಿಗೆ ಮಂಜೂರಾತಿ ಸಿಕ್ಕಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ ದೇಶಪಾಂಡೆ, ಪ್ರಕಾಶ ಲಕ್ಷೆಟ್ಟಿ ಉಪಸ್ಥಿತರಿದ್ದರು.

ಆರ್ಟಿಫಿಸಿಯಲ್ ಇಂಟಲಿಜೆನ್ಸ್, ಸೈಬರ್ ಸೆಕ್ಯುರಿಟಿ, ಇಲೆಕ್ರಿಕಲ್ ಇಂಜನಿನಿಯರಿಂಗ್ ವಿಭಾಗಗಳನ್ನು ಕಾರ್ಯಾರಂಭ ಮಾಡಲಿದ್ದು, ಪ್ರತಿ ವಿಭಾಗದಲ್ಲಿ ತಲಾ 60 ವಿದ್ಯಾರ್ಥಿಗಳು ದಾಖಲಾತಿಯನ್ನು ಪಡೆಯಬಹುದು. ಇದೇ ಸೆಪ್ಟೆಂಬರ್‌ನಿಂದ ಪ್ರಾರಂಭವಾಗುವ ಈ ಕಾಲೇಜಿನಲ್ಲಿ ನುರಿತ ಶಿಕ್ಷಕ, ಸಿಬ್ಬಂದಿಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನವರು ನೇಮಿಸಿದ್ದಾರೆ ಎಂದರು.

ಗೋಕಾಕ ನಗರದಲ್ಲಿ ಪ್ರಾರಂಭವಾಗುವ ಕಾಲೇಜು ಮೂಡಲಗಿ, ಯರಗಟ್ಟಿ, ಹುಕ್ಕೇರಿ, ಸಂಕೇಶ್ವರ, ನೇರಸಗಿ, ಅಥಣಿ, ಚಿಕ್ಕೋಡಿ ಸೇರಿದಂತೆ ಇತರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಸಮೀಪ ಹಾಗೂ ಕೇಂದ್ರ ಸ್ಥಳವಾಗಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೂರದ ನಗರಗಳಿಗೆ ಹೋಗಿ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು. ಹಾಗಾಗಿ ಗೋಕಾರ ನಗರದಲ್ಲಿ ಪ್ರಾರಂಭಗೊಂಡಿರುವ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಶೀಘ್ರದಲ್ಲೇ ಕಾಲೇಜಿಗೆ ಸ್ವಂತ ಕಟ್ಟಡ: ಮುಂಬರುವ 2 ವರ್ಷಗಳ ಕಾಲ ಈ ಇಂಜಿನಿಯರಿಂಗ್ ಕಾಲೇಜು ಸತೀಶ್ ಶುಗರ್ಸ್ ಅಕಾಡೆಮಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಶಾಸಕ ರಮೇಶ ಜಾರಕಿಹೊಳಿ ಅವರು ನಗರದ ಎಪಿಎಂಸಿ ಸಮೀಪದಲ್ಲಿ ಜಾಗ ನೀಡುವುದಾಗಿ ಹೇಳಿದ್ದಾರೆ.

ಜಾಗ ಮಂಜೂರು ಆದನಂತರ ಲೋಕೋಪಯೋಗಿ ಇಲಾಖೆ ವತಿಯಿಂದ ಸುಸಜ್ಜಿತ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ನೂತನವಾಗಿ ಕಾರ್ಯಾರಂಭಗೊಳ್ಳಲಿರುವ ಇಂಜಿನಿಯರಿಂಗ್ ಕಾಲೇಜಿನ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಂಡು ಒಳ್ಳೆಯ ವಿದ್ಯಾರ್ಜನೆ ಮಾಡಬೇಕು ಎಂದು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version