Home ಅಪರಾಧ ವಿಮೆ ಮಾಡಿಸಿ ತಂದೆಯನ್ನೇ ಕೊಂದ ಮಗ

ವಿಮೆ ಮಾಡಿಸಿ ತಂದೆಯನ್ನೇ ಕೊಂದ ಮಗ

0

ಕಲಬುರಗಿ: ಹಣದಾಸೆಗೆ ತಂದೆ ಹೆಸರಿನಲ್ಲಿ ವಿಮೆ ಮಾಡಿಸಿ ಅಪಘಾತಪಡಿಸಿ ಕೊಲೆ ಮಾಡಿದ ಮಗನೊಬ ಈಗ ಪೊಲೀಸ್‌ರ ಅತಿಥಿಯಾಗಿದ್ದಾನೆ. ಆತನಿಗೆ ಸಹಕರಿಸಿದ ಇನ್ನೂ ಮೂವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಗರದಲ್ಲಿ ನಡೆದಿದೆ.
ಆದರ್ಶ ನಗರದಲ್ಲಿ ವಾಸವಾಗಿದ್ದ ಸತೀಶ (೩೦) ಎಂಬಾತನೇ ತನ್ನ ತಂದೆ ೬೦ ವರ್ಷದ ಕಾಳಿಂಗರಾಯನಿಗೆ ೩೦ ಲಕ್ಷ ರೂ. ಮೊತ್ತದ ವಿಮೆ ಮಾಡಿಸಿ, ಕೊಲೆಗೆ ಸ್ಕೇಚ್ ಹಾಕಿ ಅಪಘಾತವೆಂದು ಬಿಂಬಿಸಿ ಕೊನೆಗೆ ಪೊಲೀಸ್ ಅತಿಥಿಯಾಗಿದ್ದಾನೆ. ವಿಮೆ ಮಾಡಿಸುವಂತೆ ಸಲಹೆ ನೀಡಿದ ಮಾಸ್ಟರ್ ಮೈಂಡ್ ಅರುಣಕುಮಾರ, ರಾಕೇಶ ಮತ್ತು ಯುವರಾಜ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಜುಲೈ ತಿಂಗಳಲ್ಲಿ ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಣ್ಣೂರು(ಬಿ) ಕ್ರಾಸ್‌ನ ಕಮಾನ ಹತ್ತಿರ ನಡೆದಿದ್ದ ಅಪಘಾತದ ಪ್ರಕರಣವನ್ನು ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆಗೈದು ಸತ್ಯಾಂಶ ಬಯಲಿಗೆಳೆದಿದ್ದಾರೆ.
ಸತೀಶ ಆದರ್ಶ ನಗರದಲ್ಲಿ ಸಣ್ಣದಾದ ಹೊಟೇಲ್ ನಡೆಸುತ್ತಿದ್ದನು ಮನೆ ಕಟ್ಟಲು ಮಾಡಿದ್ದ ಸಾಲ ಹೇಗೆ ಮುಟ್ಟಿಸಬೇಕೆಂದು ಚಿಂತೆಯಲ್ಲಿ ತೊಡಗಿದ್ದ. ಆಗಾಗ ಹೊಟೇಲ್‌ಗೆ ಬರುತ್ತಿದ್ದ ಅರುಣಕುಮಾರ ಜತೆ ಮಾತನಾಡಿ ವಿಮೆ ಮಾಡಿಸುವ ಹಾಗೂ ಕೊಲೆ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ.
ಸತೀಶ ತನ್ನ ತಂದೆಯನ್ನು ಕಳೆದ ಜುಲೈ ೮ ರಂದು ಸಂಜೆ ೭.೩೦ಕ್ಕೆ ಸಾಲ ತೆಗೆದುಕೊಂಡು ಬರೋಣವೆಂದು ಹೇಳಿ ಸ್ಕೂಟಿಯಲ್ಲಿ ೨೦ ಕಿಮೀ ದೂರದ ಬೆಣ್ಣೂರ (ಬಿ) ಕ್ರಾಸ್ ಬಳಿ ಕರೆದುಕೊಂಡು ಹೋಗಿ ಬೈಕ್ ನಿಲ್ಲಿಸಿ ತಾನು ಶೌಚಕ್ಕೆ ಹೋಗಿ ಬರುವುದಾಗಿ ಹೇಳಿ ಸ್ವಲ್ಪ ದೂರ ಹೋಗಿ ನಿಂತು ಟ್ರ‍್ಯಾಕ್ಟರ್ ಹಾಯಿಸಿ ತಂದೆಯನ್ನೇ ಕೊಲೆ ಮಾಡಿಸಿದ್ದಾನೆ. ಟ್ರ‍್ಯಾಕ್ಟರ್ ಹಾಯ್ದಿದ್ದರಿಂದ ಕಾಳಿಂಗರಾಯ ಸ್ಥಳದಲ್ಲೇ ಮೃತಪಟ್ಟಿದ್ದನು. ಈಗ ಪೊಲೀಸರು ತನಿಖೆ ನಡೆಸಿ ಪ್ರಕರಣ ಬೇಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀ ನಿವಾಸಲು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

Exit mobile version