ಹುಬ್ಬಳ್ಳಿ : ಮಹದಾಯಿ, ಕಳಸಾ ಬಂಡೂರಿ ನಾಲಾ ನೀರಿನ ಯೋಜನೆ ಜಾರಿ ವಿಷಯದಲ್ಲಿ ಬಿಜೆಪಿ ಡಬಲ್ ಎಂಜಿನ್ ಸರ್ಕಾರಗಳಿಗೆ ಕಾಳಜಿ ಇಲ್ಲ. ಇಚ್ಛಾ ಶಕ್ತಿ ಕೊರತೆ ಎದ್ದು ಕಾಣುತ್ತದೆ. ಈ ಧೋರಣೆ ಖಂಡಿಸಿ ಜನವರಿ 2 ರಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ್ಯಾಲಿ ಆಯೋಜಿಸಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಶಾಸಕ ಎಚ್.ಕೆ ಪಾಟೀಲ್ ಹೇಳಿದರು.
ಫತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆ ಜಾರಿ ವಿಷಯದಲ್ಲಿ ಕೇಂದ್ರ ಮತ್ರು ರಾಜ್ಯ ಸರ್ಕಾರ ಅಸಡ್ಡೆ ಧೋರಣೆ ಅನುಸರಿಸಿಕೊಂಡು ಬಂದಿವೆ. ಡಿಪಿಆರ್ ಕೂಡಾ ಮಾಡಲು ಆಗಿಲ್ಲ. ಮಹಾದಾಯಿ ಶೀಘ್ರ ಜಾರಿಗೊಳಿಸುತ್ತೇವೆ ಎಂದು ಯಡಿಯೂರಪ್ಪ ಅವರು ಗೋವಾ ಸಿಎಂ ಪತ್ರವನ್ನು ತೋರಿಸಿದ್ದರು. ಮೂರು ವರ್ಷವಾದರೂ ಯಾಕೆ ಆಗಿಲ್ಲ. ಬೊಮ್ಮಾಯಿ ಅವರು ಹಸಿರು ಶಾಲು ಹಾಕಿಕೊಂಡು ಮಹದಾಯಿ ಯೋಜನೆ ಜಾರಿಗೆ ರೈತರೊಂದಿಗೆ ಹೋರಾಟ ನಡೆಸಿದ್ದರು. ಆಗಿನ ಛಲ ಈಗ ಮುಖ್ಯಮಂತ್ರಿ ಆದಾಗ ಏಕಿಲ್ಲ ಎಂದು ಪ್ರಶ್ನಿಸಿದರು.
ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ. ಯೋಜನೆ ಜಾರಿಗೆ ಮನಸ್ಸಿಲ್ಲ. ಹೀಗಾಗಿ ಆ ಧೋರಣೆ ಖಂಡಿಸಿ ಕಾಂಗ್ರೆಸ್ ಪಕ್ಷ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಹೇಳಿದರು.