Home ನಮ್ಮ ಜಿಲ್ಲೆ ಬಳ್ಳಾರಿ ಮನೆ ಮನೆ ಮೇಲೆ ರಾರಾಜಿಸಿದ ತ್ರಿವರ್ಣ ಧ್ವಜ

ಮನೆ ಮನೆ ಮೇಲೆ ರಾರಾಜಿಸಿದ ತ್ರಿವರ್ಣ ಧ್ವಜ

0
ಎಚ್.ಆರ್. ಗವಿಯಪ್ಪ ವೃತ್ತದಲ್ಲಿ ಸೇರಿದ್ದ ಜನಸಾಗರ ಉದ್ದೇಶಿಸಿ ಮಾತನಾಡಿದ ಸಚಿವ ಬಿ. ಶ್ರೀರಾಮುಲು.

ಬಳ್ಳಾರಿ: ಭಾರತ ಮಾತೆ ಬ್ರಿಟಿಷ್ ದಾಸ್ಯದಿಂದ ಮುಕ್ತಗೊಂಡು ೭೫ ವರ್ಷ ಕಳೆದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆನೀಡಿದ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಕಾರ್ಯಕ್ರಮಕ್ಕೆ ಬಳ್ಳಾರಿ ಜನರು ಭರಪೂರ ಬೆಂಬಲ ಸೂಚಿಸಿದರು.
ಮನೆ, ಕಚೇರಿ, ಅಂಗಡಿ ಎನ್ನದೆ ಪ್ರತಿಯೊಬ್ಬರೂ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದರು. ತ್ರಿವರ್ಣ ಧ್ವಜಕ್ಕೆ ವಂದಿಸಿ, ಗೌರವಿಸಿದರು. ಇಡೀ ಬಳ್ಳಾರಿ ನಗರವನ್ನು ಹದ್ದಿನ ಎತ್ತರದಿಂದ ನೋಡಲು ಅವಕಾಶ ಸಿಕ್ಕರೆ ಬಹುಶಃ ಒಂದೇ ಒಂದು ಮನೆ ಮೇಲೆ ಸಹಿತ ತ್ರಿವರ್ಣ ಧ್ವಜ ಇಲ್ಲದೆ ಇರುವುದು ಕಂಡುಬರುತ್ತಿರಲಿಲ್ಲ ಎನ್ನಿಸುತ್ತದೆ. ಜಿಲ್ಲಾಡಳಿತ ವಿವಿಧೆಡೆ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮ ಸಹ ಬಹಳ ಸಡಗರ, ಸಂಭ್ರಮ, ವೈಭವದಿಂದ ನಡೆದವು.
ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಬಳ್ಳಾರಿ ಗ್ರಾಮೀಣ ಶಾಸಕ ಜಿ. ಸೋಮಶೇಖರ ರೆಡ್ಡಿ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತ್ರಿವರ್ಣ ಧ್ವಜ ಹಿಡಿದು ಜಿಲ್ಲಾಧಿಕಾರಿ ಕಚೇರಿಯಿಂದ ನಡೆದುಕೊಂಡೇ ಬಂದು ಎಚ್.ಆರ್. ಗವಿಯಪ್ಪ ವೃತ್ತ ತಲುಪಿದರು. ವಿವಿಧ ಶಾಲಾ, ಕಾಲೇಜುಗಳು ಸುಮಾರು ೧೨ ಸಾವಿರ ವಿದ್ಯಾಥಿ೯ಗಳು, ಅವರೊಂದಿಗೆ ಶಿಕ್ಷಕ, ಉಪನ್ಯಾಸಕರ ದಂಡು ಸಾಗಿತು. ಎಚ್.ಆರ್. ಗವಿಯಪ್ಪ ವೃತ್ತದಲ್ಲಿ ೧೫೦ ಅಡಿ ಎತ್ತರದ ಧ್ವಜ ಕಂಬದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಭಾರತಾ ಮಾತೆಗೆ ಹಾಕಿದ ಜೈಕಾರ ಮುಗಿಲುಮುಟ್ಟಿತು!
ಇನ್ನು ನಗರದ ವಿವಿಧ ಭಾಗಗಳಲ್ಲಿ ಯಾವ ಮನೆ ಮೇಲೆ ನೋಡಿದರೂ ವಿವಿಧ ಗಾತ್ರಗಳ ತ್ರಿವರ್ಣ ಧ್ವಜ ರಾರಾಜಿಸಿತು. ವಿವಿಧತೆಯಲ್ಲಿ ಏಕತೆ ಎಂಬ ಯುಕ್ತಿಗೆ ಸೂಕ್ತವಾದ ಚಿತ್ರಣವನ್ನು ಎಲ್ಲರ ಕಣ್ಣು ಮುಂದೆ ತಂದು ಕೊಡುವಷ್ಟರಮಟ್ಟಿಗೆ ಇಡೀ ನಗರ ಸಿಂಗಾರಗೊಂಡಿತ್ತು.

ತ್ರಿವರ್ಣ ಧ್ವಜ
ಎಚ್.ಆರ್. ಗವಿಯಪ್ಪ ವೃತ್ತದಲ್ಲಿ ಸೇರಿದ್ದ ಜನಸಾಗರ ಉದ್ದೇಶಿಸಿ ಮಾತನಾಡಿದ ಸಚಿವ ಬಿ. ಶ್ರೀರಾಮುಲು.

Exit mobile version