ಬಳ್ಳಾರಿ: ಮಗನ ಜನ್ಮದಿನದ ಸಂಭ್ರಮದಲ್ಲಿದ್ದ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ದಂಧೆಮಾಡಿಕೊAಡಿದ್ದ ಕಾರ್ಪೆಂಟರ್ ಆಗಿದ್ದ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಮಾಡಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಗುಗ್ಗರಹಟ್ಟಿಯ ಮೆಹಬೂಬ್ ಭಾಷಾ(37) ದುಷ್ಕರ್ಮಿಗಳಿಂದ ಕೊಲೆಯಾದ ದುರ್ದೈವಿ. ಕೊಲೆಗೆ ಕಾರಣ ತಿಳಿದಿಲ್ಲ.
ಬುಧವಾರ ಸಂಜೆ ವೇಳೆಗೆ ಭಾಷಾ ತನ್ನ ಮಗನ ಜನ್ಮದಿನದ ನಿಮಿತ್ತ ಮನೆಗೆ ಕೇಕ್ ತಂದು ಅತಿ ಸಂಭ್ರಮದಲ್ಲಿ ಇದ್ದ. ಆದರೆ, ಏಕಾಏಕಿ ರಾತ್ರಿ ವೇಳೆಗೆ ಮನೆಗೆ ಬಂದ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿದ್ದಾರೆ. ನಾಲ್ಕು ಜನರ ತಂಡ ಮನೆಯಲ್ಲಿದ್ದ ಭಾಷಾನನ್ನು ಹೊರಗೆ ಕರೆದು ಬೆನ್ನು ಹತ್ತಿ ಕೊಲೆಮಾಡಿದ್ದಾರೆ. ಜೀವ ಉಳಿಸಿಕೊಳ್ಳಲು ಭಾಷಾ ಓಡೋಡಿ ಹೋಗಿದ್ದಾನೆ. ಆದರೆ, ಆತನ ಬೆನ್ನು ಹತ್ತಿದ್ದ ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿ ಹಾಕಿದ್ದಾರೆ. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಆತ ಸಾವಿಗೀಡಾಗಿದ್ದಾನೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಕೆಆರ್ಪಿ ಸೇರಿದ್ದ ಭಾಷಾ ಚುನಾವಣೆಯಲ್ಲಿ ಸಕ್ರಿಯವಾಗಿ ಓಡಾಡಿಕೊಂಡಿದ್ದ. ಅಷ್ಟೇ ಅಲ್ಲ ಇತ್ತೀಚಿಗೆ ರಿಯಲ್ ಎಸ್ಟೇಟ್ ದಂಧೆ ಸಹ ಉತ್ತಮವಾಗಿ ಕೈ ಹಿಡಿದಿತ್ತು. ಬಹುಶಃ ಇದೇ ಕಾರಣಕ್ಕೆ ಯಾರೋ ಆಗದವರು ಕೊಲೆ ಮಾಡಿರಬಹುದು ಎಂದು ಶಂಕೆವ್ಯಕ್ತವಾಗಿದೆ. ಇತ್ತ ವಿಧಾನ ಸಭಾ ಅಧಿವೇಶನದಲ್ಲಿ ಗಂಗಾವತಿ ಶಾಸಕ, ಕೆಆರ್ಪಿ ವರಿಷ್ಠ ಜನಾರ್ಧನ ರೆಡ್ಡಿ ತಮ್ಮ ಪಕ್ಷದ ಕಾರ್ಯಕರ್ತನ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
