ಹುಬ್ಬಳ್ಳಿ: ಬೆಣ್ಣೆಹಳ್ಳ, ತುಪ್ಪರಿಹಳ್ಳ ಪ್ರವಾಹ, ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ೧೬೦೦ ಕೋಟಿ ವೆಚ್ಚದಲ್ಲಿ ಡಿಪಿಆರ್ ಮಾಡಲಾಗಿದೆ. ಮೊದಲ ಹಂತದಲ್ಲಿ ೨೦೦ ಕೋಟಿ ವೆಚ್ಚದಲ್ಲಿ ೧೪೧ ಕಿ.ಮೀ ಕಾಮಗಾರಿ ನಡೆಯಲಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಇತ್ತೀಚೆಗೆ ಸುರಿದ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದ ಹಳೆಹುಬ್ಬಳ್ಳಿ ನಿವಾಸಿ ಹುಸೇನಸಾಬ ಕಳಸ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ,ಸರಕಾರದ ಪರಿಹಾರ ಧನದ ಆದೇಶ ಪ್ರತಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮುಂದಿನ ದಿನಗಳಲ್ಲಿ ಬೆಣ್ಣೆಹಳ್ಳ, ತುಪ್ಪರಿಹಳ್ಳದಿಂದ ರೈತರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಹಳ್ಳಕ್ಕೆ ಡಿಸೆಂಟ್ ಮಾಡಲು ಕೇಂದ್ರ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗಿದೆ ಎಂದರು. ನವಲಗುಂದ ಕ್ಷೇತ್ರದಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಾಗುತ್ತಿದೆ. ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಪ್ರವಾಹ ಹೆಚ್ಚಾಗಿದ್ದು, ಜನರು ಜಾಗೃತರಾಗಬೇಕು ಎಂದರು.
ನಮ್ಮ ಸರಕಾರ ಬಂದ ಮೇಲೆ ಪರಿಹಾರ ಸರಿಯಾಗಿ ಕೊಡಲಾಗುತ್ತಿದೆ. ಹಿಂದೆ ಮನೆ ಹಾನಿಯಾದವರಲ್ಲಿ ಕೆಲವು ಗೊಂದಲಗಳಿವೆ. ಹೀಗಾಗಿ ಕೆಲವು ಕಡೆ ಪರಿಹಾರ ಮುಟ್ಟಿಲ್ಲ. ಸರಿಪಡಿಸಲಾಗುವುದು ಎಂದರು. ನಗರದಲ್ಲಿ ಓಪನ್ ಡ್ರೈನಜ್ ಮುಚ್ಚಲು ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ. ಕಳೆದ ದಿನದವರೆಗೆ ಜಿಲ್ಲೆಯಲ್ಲಿ ೧೨೦ ಮನೆಗಳು ಬಿದ್ದಿವೆ. ೨ ಪ್ರಾಣಹಾನಿಯಾಗಿವೆ. ಸರಕಾರದಿಂದ ಪರಿಹಾರ ಕೊಡುವ ಕಾರ್ಯ ನಡೆಯುತ್ತಿದೆ ಎಂದರು.
ಮೃತ ಹುಸೇನಸಾಬ್ ಅವರಿಗೆ ಸರಕಾರದಿಂದ ಐದು ಲಕ್ಷ ಪರಿಹಾರ ಕೊಡಲಾಗಿದೆ. ಮುಖ್ಯಮಂತ್ರಿಗಳು ನೇರವಾಗಿ ಮಾತನಾಡಿದ್ದಾರೆ. ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಲು ತಿಳಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಸರಾಸರಿ ಶೇ.೬೦ ರಷ್ಟು ಮಳೆ ಒಂದೆ ದಿನ ಆಗಿದೆ. ಇದರಿಂದ ಕೆಲವೊಂದಿಷ್ಟು ಸಮಸ್ಯೆ ಆಗಿದೆ ಎಂದರು.