Home ನಮ್ಮ ಜಿಲ್ಲೆ ಉಡುಪಿ ‘ಬೆಳದಿಂಗಳ ಸೋನೆಮಳೆ’ಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ

‘ಬೆಳದಿಂಗಳ ಸೋನೆಮಳೆ’ಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ

0

ಉಡುಪಿ; ಇಲ್ಲಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಧಾರವಾಡದ ಲೇಖಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಅವರ `ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿ 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಆಗಸ್ಟ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾದ ಡಾ.ಪ್ರಜ್ಞಾ ಮತ್ತಿಹಳ್ಳಿ, ಎಂ.ಕಾಂ ಎಂ.ಫಿಲ್ ಎಂ.ಬಿ.ಎ. ಪಿ.ಎಚ್.ಡಿ ಪದವೀಧರರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ ಹಲವಾರು ಸರಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಅನೇಕ ಕವನ, ಕತೆ, ಕವಿತೆ, ಪ್ರಬಂಧ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಬಹುಮಾನ ಗಳಿಸಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಶಿಲ್ಲಾಂಗ್ನಲ್ಲಿ ಏರ್ಪಡಿಸಿದ ಬರಹಗಾರರ ರಾಷ್ಟ್ರ ಮಟ್ಟದ ಸಮ್ಮೇಳನದಲ್ಲಿ ಕಥಾ ವಾಚನ, ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಕವಿತೆ ವಾಚನ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಅನುದಾನ ಯೋಜನೆಯಲ್ಲಿ ಆಯ್ಕೆಯಾಗಿ ಕೇರಳ ರಾಜ್ಯ ಪ್ರವಾಸ ಮಾಡಿ ಪುಸ್ತಕ ರಚನೆ, 2015- 16ನೇ ಸಾಲಿನ ಫೆಲೋಶಿಪ್ ಗೆ ಆಯ್ಕೆಯಾಗಿ ಮಹಿಳಾ ವಿಚಾರಣಾಧೀನ ಖೈದಿಗಳ ಕುರಿತು ಅಧ್ಯಯನ ಮಾಡಿ ಪುಸ್ತಕ ರಚನೆ ಮಾಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2016 ಕಾರ್ಯಾಗಾರದಲ್ಲಿ ಭಾಗವಹಿಸಿ ಮಹಿಳಾ ಶೋಷಣೆ ಕುರಿತು ಬರೆದ ನಾಟಕ ‘ಕೇಳೆ ಸಖಿ ಚಂದ್ರಮುಖಿ’ ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿ ಪ್ರದರ್ಶನ ಕಾಣುತ್ತಿದೆ.

ಅವರ ಪ್ರಕಟಿತ ಕೃತಿಗಳು, ಹುಡುಗಿ ನಕ್ಕಾಗ, ದೊನ್ನೆ ದೀಪ ಸಾಲು, ಕಾಲನ ಕಾಲಂದುಗೆ (ಕವನ ಸಂಕಲನಗಳು), ಗಂಧಗಾಳಿ [ಅಂಕಣ ಬರಹ], ಮಿನುಗೆಲೆ ನಕ್ಷತ್ರ [ಹಾಸ್ಯ ಪ್ರಬಂಧ] ದೇವರ ಸ್ವಂತ ನಾಡಿನಲ್ಲಿ (ಪ್ರವಾಸ ಕಥನ), ಅಲ್ಲದೆ ಹಲವಾರು ಪ್ರಬಂಧಗಳು, ವ್ಯಕ್ತಿಚಿತ್ರ, ಅಭಿನಂದನಾ ಗ್ರಂಥಗಳನ್ನು ಸಂಪಾದಿಸಿದ್ದಾರೆ.

ಯಕ್ಷಗಾನ ತಾಳಮದ್ದಲೆ, ನಾಟಕ, ಏಕಪಾತ್ರಾಭಿನಯಗಳಲ್ಲಿ ಪ್ರದರ್ಶನ ನೀಡಿದ್ದಾರೆ. ವಿಭಾ ಸಾಹಿತ್ಯ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಲ್ಲದೆ ಹಲವಾರು ಗೌರವ ಸಮ್ಮಾನಗಳಿಗೆ ಭಾಜನರಾಗಿದ್ದಾರೆ.

ಪ್ರಸ್ತುತ ಕಿತ್ತೂರು ಸರಕಾರಿ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ.

Exit mobile version