ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಸರ್ಕಾರಿ ಆವರಣಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ನಂತರ, ಈ ವಿಷಯ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ.
ಈ ಬೆಳವಣಿಗೆಯ ಬೆನ್ನಲ್ಲೇ, ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆಗಳು ಮತ್ತು ಅವಾಚ್ಯ ಶಬ್ಧಗಳಿಂದ ನಿಂದನೆ ಎದುರಾಗಿವೆ. ಈ ಕುರಿತು ಸ್ವತಃ ಪ್ರಿಯಾಂಕ್ ಖರ್ಗೆ ಅವರೇ ತಮ್ಮ ಸಾಮಾಜಿಕ ಜಾಲತಾಣವಾದ ‘ಎಕ್ಸ್’ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ, ಆರ್‌ಎಸ್‌ಎಸ್ ಕುರಿತು ತಮ್ಮ ಬೇಸರ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಖರ್ಗೆ ತಮ್ಮ ಟ್ವೀಟ್‌ನಲ್ಲಿ, “ಆರ್‌ಎಸ್‌ಎಸ್ ಯುವಕರ, ಮಕ್ಕಳ ಮನಸುಗಳಲ್ಲಿ ಕಲ್ಮಶ ತುಂಬುವ ಕೆಲಸ ಮಾಡುತ್ತಿದೆ ಎಂದಿದ್ದೆ, ಅವರು ತುಂಬಿದ ಕಲ್ಮಶವು ಹೇಗಿರುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ” ಎಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಆ ವಿಡಿಯೋದಲ್ಲಿ, ಬಂದಿರುವ ನಿಂದನೀಯ ಆಡಿಯೋ ಕ್ಲಿಪ್‌ಗಳನ್ನು ಸಾರ್ವಜನಿಕರ ಮುಂದಿಟ್ಟಿದ್ದಾರೆ. “ಕಳೆದ ಕೆಲವು ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿರುವ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್ ಅಷ್ಟೇ. ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಛವಾಗಿ ನಿಂದಿಸುವುದೇ ಶಾಖೆಗಳಲ್ಲಿ ನೀಡುವ ಸಂಸ್ಕಾರವೇ?” ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಇದೇ ವೇಳೆ, ವಿರೋಧ ಪಕ್ಷದ ನಾಯಕರನ್ನುದ್ದೇಶಿಸಿ ನೇರ ಪ್ರಶ್ನೆಯೊಂದನ್ನು ಎಸೆದಿದ್ದಾರೆ. “ಮೋದಿ ಹಾಗೂ ಮೋಹನ್ ಭಾಗವತ್ ಅವರ ತಾಯಿಯಂದಿರಿಗೆ ಇದೇ ಬಗೆಯಲ್ಲಿ ನಿಂದಿಸುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಆರ್. ಅಶೋಕ್, ಸಿ.ಟಿ. ರವಿ, ಸುನೀಲ್ ಕುಮಾರ್ ಮುಂತಾದ ಬಿಜೆಪಿ ನಾಯಕರು ಒಪ್ಪುತ್ತಾರೆಯೇ?” ಎಂದು ಕೇಳುವ ಮೂಲಕ ರಾಜಕೀಯ ವಲಯದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದ್ದಾರೆ.
ಆರ್‌ಎಸ್‌ಎಸ್ ಕಾರ್ಯಕರ್ತರನ್ನು ‘ಕಾಲಾಳುಗಳು’ ಎಂದು ಕರೆದಿರುವ ಖರ್ಗೆ, ಅವರನ್ನು ‘ವಿಕಾರಧಾರೆಯಿಂದ ವಿಚಾರಧಾರೆಯೆಡೆಗೆ’ ಕರೆತರಬೇಕಿದೆ ಎಂದಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಮೌಲ್ಯಯುತ ಚಿಂತನೆಗಳನ್ನು ಪರಿಚಯಿಸುವುದು ಮತ್ತು ಮುಗ್ಧ ಮಕ್ಕಳು, ಯುವ ಸಮುದಾಯವನ್ನು ಇಂತಹ ಕಲುಷಿತ ವ್ಯವಸ್ಥೆಗೆ ಬಲಿಯಾಗದಂತೆ ತಡೆಯುವುದು ತಮ್ಮ ಹೋರಾಟದ ಮುಖ್ಯ ಗುರಿ ಎಂದು ದೃಢವಾಗಿ ಹೇಳಿದ್ದಾರೆ.
ಈ ಬೆದರಿಕೆಗಳು ಮತ್ತು ನಿಂದನೆಗಳಿಗೆ ತಾನು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಿಯಾಂಕ್ ಖರ್ಗೆ, ತಮ್ಮ ರಾಜಕಾರಣ ಅಧಿಕಾರ ಕೇಂದ್ರಿತವಲ್ಲ, ಬದಲಿಗೆ ಸೈದ್ಧಾಂತಿಕ ರಾಜಕಾರಣ, ಜನಕೇಂದ್ರಿತ ರಾಜಕಾರಣ ಎಂದು ಒತ್ತಿ ಹೇಳಿದ್ದಾರೆ.
ಯುವ ಸಮುದಾಯವನ್ನು ವಿಷವರ್ತುಲದಿಂದ ಹೊರತರುವ ಗುರಿ ತಮಗಿದೆ ಎಂದು ಪುನರುಚ್ಚರಿಸಿದ್ದಾರೆ. ಸರ್ಕಾರಿ ಶಾಲೆಗಳ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ತಮಿಳುನಾಡು ಮಾದರಿ ಕ್ರಮ ಜಾರಿಗೊಳಿಸುವ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಈ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡಿವೆ.