Home ತಾಜಾ ಸುದ್ದಿ ‘ಪ್ರತೀ ನಾಗರಿಕನಿಗೂ ಅವನ ಧರ್ಮದ ಅನುಷ್ಠಾನದ ಹಕ್ಕಿದೆ’

‘ಪ್ರತೀ ನಾಗರಿಕನಿಗೂ ಅವನ ಧರ್ಮದ ಅನುಷ್ಠಾನದ ಹಕ್ಕಿದೆ’

0

ಮಂಗಳೂರು: ಸಾಂವಿಧಾನಾತ್ಮಕವಾಗಿ ಎಲ್ಲಾ ಇಲಾಖೆಗಳಲ್ಲೂ ಪ್ರತಿ ನಾಗರಿಕನಿಗೂ ಅವನ ಧರ್ಮದ ಅನುಷ್ಠಾನದ ಹಕ್ಕಿದೆ. ಹತ್ತಾರು ವರ್ಷಗಳಿಂದ ಎಲ್ಲಾ ಇಲಾಖೆಗಳಲ್ಲೂ ಧಾರ್ಮಿಕ ಆಧಾರದಲ್ಲಿ ಪೂಜೆಗಳು ನಡೆಯುತ್ತಿವೆ. ಆಯುಧ ಪೂಜೆ, ಶಿಲಾನ್ಯಾಸಗಳ ಸಮಯದಲ್ಲಿ ಸಂಪ್ರದಾಯಬದ್ಧವಾಗಿ ನಡೆದಿದೆ. ಆದರೆ ಇಂದು ಇದನ್ನು ತಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಹೀನ ರಾಜಕಾರಣ ಮತ್ತು ಸಿದ್ದರಾಮಯ್ಯ ಮಾನಸಿಕತೆ ಇದರಿಂದ ಬಯಲಾಗಿದೆ. ಒಬ್ಬ ಮುಖ್ಯಮಂತ್ರಿ ಸಾಂವಿಧಾನಿಕವಾಗಿ ಆತನ ಧಾರ್ಮಿಕ ಆಚರಣೆಗೆ ಅಡ್ಡಿ ಬರುವುದು ಸರಿಯಲ್ಲ. ಹಿಂದಿನಿಂದ ನಡೆದುಕೊಂಡು ಬಂದ ಪೂಜೆಗಳನ್ನ ಕೆಲವು ಇಲಾಖೆಗಳಲ್ಲಿ ಮಾಡುತ್ತಾರೆ. ನಂಬಿಕೆಗಳ ಆಧಾರದಲ್ಲಿ ಕೆಎಸ್‌ಆರ್‌ಟಿಸಿ, ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಮಾಡುತ್ತಾರೆ. ಇಂತಹ ಪೂಜೆಗಳನ್ನ ನಿಷೇಧಿಸುವ, ಬಹಿಷ್ಕಾರ ಹಾಕುವ ಕ್ರಮ ಸರಿಯಲ್ಲ. ಪೂಜೆ ಮಾಡುವ ಪೊಲೀಸರನ್ನ ಒಂದು ಪಾರ್ಟಿಗೆ ಸೀಮಿತ ಮಾಡುವ ಹೀನ ರಾಜಕಾರಣ ಕಾಂಗ್ರೆಸ್‌ನಿಂದ ಆಗುತ್ತಿದೆ ಎಂದರು.
ನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಜರಂಗದಳ ನಿಷೇಧವನ್ನು ಉಲ್ಲೇಖ ಮಾಡುತ್ತಿದ್ದಾರೆ. ಇದು ಹಿಂದೂ ಸಮಾಜ, ಆಚರಣೆ ಹಾಗೂ ರಾಷ್ಟ್ರ ಭಕ್ತ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಹೇಗೆ ಸವಾರಿ ಮಾಡುತ್ತದೆ ಎಂಬುದನ್ನು ತೋರಿಸಿದೆ. ಇಂತಹ ಕ್ರಮಗಳ ವಿರುದ್ಧ ಹೋರಾಟ ಮಾಡಿ ಉತ್ತರ ಕೊಡುವ ಶಕ್ತಿ ಬಿಜೆಪಿಗಿದೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಮಾನಸಿಕತೆಯನ್ನ ವಿರೋಧಿಸುತ್ತೇವೆ. ಸಂಘಟನೆಗಳ ವಿಚಾರಕ್ಕೆ ಕೈ ಹಾಕಿದರೆ ನಾವು ಉತ್ತರ ಕೊಡುತ್ತೇವೆ. ಎಲ್ಲಾ ಇಲಾಖೆಗಳಲ್ಲೂ ರಾಜಕಾರಣ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಅಧಿಕಾರಿಗಳನ್ನ ನಿಯಂತ್ರಿಸಿ ಕಾಂಗ್ರೆಸ್ ಅಜೆಂಡಾ ಹೇರುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳು ಒಳ್ಳೆಯ ಕೆಲಸ ಮಾಡಿ ರಾಜ್ಯ ಅಭಿವೃದ್ಧಿ ಆಗಿದೆ. ಇವತ್ತು ಅಂತಹ ಅಧಿಕಾರಿಗಳನ್ನು ಬೆದರಿಸುವ ತಂತ್ರಗಾರಿಕೆಯನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನೀತಿಯನ್ನ ಪ್ರಕಟಿಸಿಯೇ ಪ್ರಕಟಿಸುತ್ತದೆ. ನಾವು ಹೋರಾಟದ ಮೂಲಕ ಕಾಂಗ್ರೆಸ್‌ಗೆ ಉತ್ತರ ಕೊಡುತ್ತೇವೆ. ನಾವು ಹಿಂದೂಗಳ ಪರವಾಗಿದ್ದೇವೆ, ಗೋಹತ್ಯೆ ನಿಷೇಧ, ಮತಾಂತರ ನಿಷೇಧದ ಪರವಾಗಿದ್ದೇವೆ. ಹಿಂದೂ ಸಮಾಜಕ್ಕೆ ತೊಂದರೆಯಾದರೆ ಬಿಜೆಪಿ ಹೋರಾಟ ಮಾಡಲಿದೆ ಎಂದರು.
ಕಾಂಗ್ರೆಸ್‌ಗೆ ಬಹುಮತ ಕೊಟ್ಟರೂ ಗಲಾಟೆ ಮಾಡುತ್ತಿದ್ದಾರೆ. ಇವರು ಸರ್ಕಾರ ಬರುವ ಮೊದಲೇ ಜಗಳ ಮಾಡಿಕೊಂಡು ಬಂದವರು. ಜನಾಶೀರ್ವಾದ ಸಿಕ್ಕರೂ ಇವರ ಬೀದಿ ಜಗಳ ಜೋರಾಗಿದೆ. ಇನ್ನೂ ಮಂತ್ರಿ ಮಂಡಲ ರಚನೆ ಆಗಿಲ್ಲ, ಮಂತ್ರಿ ಮಂಡಲ ರಚನೆಯಾದರೆ ಕಾಂಗ್ರೆಸ್‌ನ ಸ್ಥಿತಿ ಏನಾಗುತ್ತೆ ಕಾದು ನೋಡಿ ಎಂದರು. ನಮ್ಮ 40% ಕಮಿಷನ್ ವಿರುದ್ಧ ಇವರು ತನಿಖೆ ಮಾಡಲಿ. ಜೊತೆಗೆ ಸಿದ್ದರಾಮಯ್ಯ ವಿರುದ್ಧ ನಾವು ಲೋಕಾಯುಕ್ತಕ್ಕೆ ಕೊಟ್ಟ ದೂರಿನ ತನಿಖೆಯೂ ಆಗಲಿ ಎಂದರು.

Exit mobile version