ಮಂಗಳೂರು: ಬಂಟ್ವಾಳ ಸಮೀಪದ ಮಾಣಿಯಲ್ಲಿ ಬಜರಂಗದಳ, ಬಿಜೆಪಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ಪೆರಾಜೆ ಭಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಅವರು ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಣಿ ಜಂಕ್ಸನ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಒಮ್ನಿ ಕಾರಿನಲ್ಲಿ ಬಂದ ತಂಡ ಸ್ಕೂಟರ್‌ಗೆ ಡಿಕ್ಕಿ ಹೊಡೆಸಿ, ಬಳಿಕ ಕಾರಿನಿಂದ ಇಳಿದ ತಂಡ ತಲವಾರಿನಿಂದ ದಾಳಿ ನಡೆಸಲಾಗಿದೆ ಎಂದು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮಂಗಳೂರು ನಿವಾಸಿ ರಾಕೇಶ್, ಮಾಣಿಯ ಮಂಜುನಾಥ್ ಯಾನೆ ಮಂಜು ಹಾಗೂ ಪ್ರವೀಣ್ ನಾಯ್ಕ್ ಯಾನೆ ಮಾಹಲಿಂಗ ಮತ್ತಿತರರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ
ಚುನಾವಣಾ ಫಲಿತಾಂಶದ ದಿನ ಬಂಟ್ವಾಳ ಶಾಸಕರ ಗೆಲುವಿನ ಸಂಭ್ರಮಾಚರಿಸುತ್ತಿದ್ದಾಗ ಪಟಾಕಿ ಸಿಡಿಸುತ್ತಿದ್ದ ವೇಳೆ ಈ ತಂಡಗಳ ಮಧ್ಯೆ ಗಲಾಟೆ ನಡೆದಿತ್ತು.
ಸ್ಥಳಕ್ಕೆ ವಿಟ್ಲ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಮರದ ತುಂಡಿನಿಂದ ಹಲ್ಲೆ
ವಿಕೆಟ್ ಅಥವಾ ಅದನ್ನು ಹೋಲುವ ಮರದ ತುಂಡಿನಿಂದ ಹಲ್ಲೆ ನಡೆಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಾಟೆ ತಿಳಿಸಿದ್ದಾರೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ, ಹಲ್ಲೆಗೆ ಒಳಗಾದವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಂದ ಹೆಚ್ಚಿನ ಮಾಹಿತಿ ಪಡೆಯಲಾಗುವುದು. ಯಾರೇ ತಪ್ಪು ಮಾಡಿದರೂ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.