Home ತಾಜಾ ಸುದ್ದಿ 40 ಪರ್ಸೆಂಟ್ ತನಿಖೆ ನನ್ನಿಂದಲೇ ಆರಂಭವಾಗಲಿ

40 ಪರ್ಸೆಂಟ್ ತನಿಖೆ ನನ್ನಿಂದಲೇ ಆರಂಭವಾಗಲಿ

0

ಮಂಗಳೂರು: ೪೦ ಪರ್ಸೆಂಟ್ ಕಮಿಷನ್ ತನಿಖೆ ನನ್ನಿಂದಲೇ ಆರಂಭವಾಗಲಿ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
೪೦ ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ತನಿಖೆ ನಡೆಸಲಾಗುತ್ತದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ತನಿಖೆಯನ್ನು ಮುಕ್ತಕಂಠದಿಂದ ಸ್ವಾಗತಿಸುತ್ತೇವೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗದ ಮಂತ್ರಿಯಾಗಿದ್ದ ನನ್ನಿಂದಲೇ ತನಿಖೆ ಆರಂಭಿಸಲಿ. ಯಾವ ತನಿಖೆಯಿಂದ ಏನಾಗುತ್ತದೆ ಎಂಬುದನ್ನು ನೋಡೋಣ ಎಂದರು.
ಪೊಲೀಸ್ ಅಧಿಕಾರಿಗಳು ಕೇಸರಿ ಶಾಲು ಧರಿಸಿದ್ದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹರಿಹಾಯ್ದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೇಸರಿ ಶಾಲು ಧರಿಸಲು ನಮ್ಮ ರಾಜ್ಯದಲ್ಲಿ ನಿಷೇಧವಿಲ್ಲ. ಕರ್ತವ್ಯದಲ್ಲಿರುವಾಗ ಅಂತಹ ಪ್ರಯೋಗ ಯಾರೂ ಮಾಡಿಲ್ಲ. ಖಾಸಗಿ ಜೀವನದಲ್ಲಿ ಅವರು ಯಾವ ಉಡುಪನ್ನು ಬೇಕಾದರೂ ಹಾಕಿಕೊಳ್ಳಬಹುದು. ಡಿಕೆಶಿ ದ್ವೇಷ ತೀರಿಸಿಕೊಳ್ಳುವಂತಹ ಮಾತುಗಳನ್ನಾಡಿದ್ದು ಖಂಡಿತಾ ಸರಿಯಲ್ಲ” ಎಂದರು.
ಡಿಕೆಶಿ ಹಾಗೂ ಸಿದ್ದರಾಮಯ್ಯನವರು ಹಿಂದಿನ ಸರ್ಕಾರದ ಸಂದರ್ಭದಲ್ಲಿದ್ದ ಅಧಿಕಾರಿಗಳ ಮೇಲೆ ಏನೇನು ದ್ವೇಷ ಸಾಧಿಸಲು ಸಾಧ್ಯವಿದೆಯೋ ಅದೆಲ್ಲವನ್ನೂ ಮಾಡುವ ವಾತಾವರಣ ಈಗ ಕಂಡು ಬರುತ್ತಿದೆ. ಇದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲ. ಅವರು ಆ ನಿಲುವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ನೈತಿಕ ಪೊಲೀಸ್ ಗಿರಿಯನ್ನು ನಿಲ್ಲಿಸುತ್ತೇವೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಹಿಂದುತ್ವಕ್ಕೆ ಹಾಗೂ ಹಿಂದೂಗಳಿಗೆ ಬಹಳ ಕಠಿಣವಾಗಲಿದೆ ಎಂಬುದು ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ಭಾವನೆಗಳಿಂದ ಅರ್ಥವಾಗುತ್ತಿದೆ. ಓಲೈಕೆ ಮಾಡಬೇಕೆನ್ನುವ ಉದ್ದೇಶದಿಂದ ಹಿಂದುತ್ವದ ಚಟುವಟಿಕೆಗಳನ್ನು ನಿಷೇಧಿಸುತ್ತೇವೆ, ಪೊಲೀಸ್ ಗಿರಿ ಮಾಡಿದ್ದಾರೆಂದು ಆರೋಪಿಸಿ ಬಂಧನ ಮಾಡುವ ಪ್ರಕ್ರಿಯೆ ಮುಂದೆ ಆಗಬಹುದು ಎಂದು ಅನಿಸುತ್ತಿದೆ. ಅಲ್ಲದೆ, ಬಿಜೆಪಿ ಸರ್ಕಾರ ತಂದಿರುವ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುವ ಕಾರ್ಯತಂತ್ರವನ್ನು ಸಿದ್ದರಾಮಯ್ಯ ರೂಪಿಸುತ್ತಾರೆ ಎಂದೆನಿಸುತ್ತದೆ. ಏನೇ ಆದರೂ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವಾಗಿ ಇದೆಲ್ಲವನ್ನೂ ವಿರೋಧಿಸಿ ಜನಸಾಮಾನ್ಯರಿಗೆ ರಕ್ಷಣೆ ಕೊಡುವ ಕಾರ್ಯವನ್ನು ನಾವು ಮಾಡಲಿದ್ದೇವೆ ಎಂದರು.

Exit mobile version