Home ಅಪರಾಧ ಪತಿಯಿಂದ ಮೋಸ, ಪತ್ನಿ ಹೋರಾಟ

ಪತಿಯಿಂದ ಮೋಸ, ಪತ್ನಿ ಹೋರಾಟ

0

ಬೆಳಗಾವಿ: ಪ್ರೀತಿಸಿ ಮದುವೆಯಾದ ಪತಿಯಿಂದಲೇ ತನಗೆ ಅನ್ಯಾಯವಾಗಿದ್ದು ಆತನ ವಿರುದ್ಧ ದೂರು ದಾಖಲಿಸಿದರೂ ನನಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿ ಬೆಳಗಾವಿಯ ಮಹಿಳಾ ಹೋರಾಟಗಾರ್ತಿ ಪ್ರಮೋದಾ ಹಜಾರೆಯವರು ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಸೋಮವಾರ ಏಕಾಂಗಿ ಪ್ರತಿಭಟನೆ ಮೂಲಕ ಗಮನ ಸೆಳೆದಿದ್ದಾರೆ.
ಬೆಳಗಾವಿ ತಾಲೂಕಿನ ಬಿಜಗರ್ಣಿಯ ಯೋಧ ಅಕ್ಷಯ ಗಣಪತಿ ನಲವಡೆ ಎಂಬಾತ ತನ್ನನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ತಾಳಿ ಕಟ್ಟಿ ವಿವಾಹವಾಗಿದ್ದಾನೆ. ನಾವಿಬ್ಬರೂ ಎರಡು ವರ್ಷಗಳ ಕಾಲ ಸಂಸಾರ ನಡೆಸಿದ್ದೇವೆ. ಆದರೆ ಈಗ ತಾನು ಮದುವೆಯೇ ಆಗಿಲ್ಲ ಎಂದು ಹೇಳಿಕೊಂಡು ತಪ್ಪಿಸಿಕೊಳ್ಳುತ್ತಿರುವ ಈತ ಸೇನೆಯಲ್ಲಿ ವೃತ್ತಿಯಲ್ಲಿರುವಾಗಲೇ ೮ ಸಿಮ್ ಬಳಸಿಕೊಂಡು, ೧೮ ಯುವತಿಯರ ಜತೆ ಚಕ್ಕಂದವಾಡುತ್ತಾ ಮದುವೆಯಾಗುವ ಭರವಸೆ ನೀಡಿ ಮೋಸ ಮಾಡುತ್ತಿದ್ದಾನೆ ಎಂದು ಪ್ರಮೋದಾ ಆರೋಪಿಸಿದ್ದಾರೆ.
ತನಗಾದ ಅನ್ಯಾಯದ ಬಗ್ಗೆ ಈಗಾಗಲೇ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವುದಕ್ಕೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಕೆಲ ರಾಜಕಾರಣಿಗಳು ಅಕ್ಷಯ ಬೆನ್ನಿಗೆ ಇದ್ದಾರೆ. ನನಗೆ ಹಾಗೂ ಅಕ್ಷಯನಿಂದ ಮೋಸ ಹೋದ ಎಲ್ಲಾ ಯುವತಿಯರಿಗೆ ನ್ಯಾಯ ಬೇಕಾಗಿದೆ. ಇವರಲ್ಲಿ ಕೆಲವರು ದೂರು ನೀಡಿದರೂ ಕ್ರಮವಾಗಿಲ್ಲ. ಇನ್ನು ಕೆಲವರು ಮಾನಕ್ಕೆ ಅಂಜಿ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ಪ್ರಮೋದ ದೂರಿದರು. ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನೆ ನಡೆಸಿ ಬಂದ ಪ್ರಮೋದಾ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

Exit mobile version