Home ಸಂಪಾದಕೀಯ ಪಂಚರಾಜ್ಯಗಳಲ್ಲಿ ಪಂಚ ಪರೀಕ್ಷೆ ಕಾಲ

ಪಂಚರಾಜ್ಯಗಳಲ್ಲಿ ಪಂಚ ಪರೀಕ್ಷೆ ಕಾಲ

0

ಕರ್ನಾಟಕದ ಗ್ಯಾರಂಟಿ ಯೋಜನೆ ಪಂಚರಾಜ್ಯಗಳ ಚುನಾವಣೆಯಲ್ಲಿ ಕೆಲಸಕ್ಕೆ ಬರುತ್ತದೆಯೇ? ಹಿಂದಿ ಭಾಷೆಯೇ ಪ್ರಧಾನವಾಗಿರುವ ಈ ಪ್ರದೇಶದಲ್ಲಿ ಮಹಿಳಾ ಮೀಸಲಾತಿ, ಜಾತಿ ಸಮೀಕ್ಷೆ ಜನ ಮನ್ನಣೆ ಪಡೆಯುವುದು ಅಗತ್ಯ. ಈ ರಾಜ್ಯಗಳ ಮತದಾನ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಆಗಬಹುದು.

ಕರ್ನಾಟಕದಲ್ಲಿ ೫ ಗ್ಯಾರಂಟಿ ಯೋಜನೆಗಳಿಂದ ಜಯಗಳಿಸಿದ ಕಾಂಗ್ರೆಸ್ ಈಗ ಹಿಂದಿ ಭಾಷೆ ಪ್ರಮುಖವಾಗಿರುವ ರಾಜ್ಯಗಳಲ್ಲಿ ಉಚಿತ ಕೊಡುಗೆಗಳು ಕೆಲಸ ಮಾಡುತ್ತವೆಯೇ ಎಂದು ಪರೀಕ್ಷಿಸುವ ಕಾಲ ಬಂದಿದೆ. ನಿತೀಶ್ ಕುಮಾರ್ ಕೈಗೊಂಡ ಜಾತಿ ಸಮೀಕ್ಷೆಗೆ ಈಗ ರೆಕ್ಕೆಪುಕ್ಕ ಬಂದಿದೆ. ಅದರ ಪರೀಕ್ಷೆಯೂ ನಡೆಯಲಿದೆ. ಬಿಜೆಪಿ ತಂದ ಮಹಿಳಾ ಮೀಸಲು ವಿಧೇಯಕಕ್ಕೆ ಜನ ಮನ್ನಣೆ ಸಿಗುತ್ತದೆಯೇ ಎಂಬುದನ್ನು ನೋಡಬೇಕಿದೆ. ಈ ಎಲ್ಲ ದೃಷ್ಟಿಯಿಂದ ೫ ರಾಜ್ಯಗಳ ವಿಧಾನಸಭೆ ಚುನಾವಣೆ ಲೋಕಸಭೆ ಚುನಾವಣೆಗೆ ಮುನ್ನ ಜನರ ನಾಡಿ ಮಿಡಿತ ಏನಿದೆ ಎಂಬುದನ್ನು ತಿಳಿಸಲಿದೆ.
ಉಚಿತ ಅಕ್ಕಿ, ವಿದ್ಯುತ್, ಬಸ್ ಪ್ರಯಾಣ, ಮನೆಯೊಡತಿಗೆ ಮಾಸಿಕ ಭತ್ಯೆ, ನಿರುದ್ಯೋಗಿಗಳಿಗೆ ನೆರವು ನೀಡುವ ಗ್ಯಾರಂಟಿಗಳಿಗೆ ಕರ್ನಾಟಕದ ಜನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ೧೩೫ ಸೀಟುಗಳನ್ನು ನೀಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದರು. ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸುವತ್ತ ಎಲ್ಲ ಕ್ರಮಗಳನ್ನು ಕೈಗೊಂಡಿತು. ಈಗ ರಾಜಾಸ್ಥಾನ, ಛತ್ತೀಸಗಢ, ಮಧ್ಯಪ್ರದೇಶ, ಮಿಜೋರಾಂ ಮತ್ತು ತೆಲಂಗಾಣದಲ್ಲಿ ಇದೇ ಗ್ಯಾರಂಟಿಗಳನ್ನು ಜಾರಿಗೆ ತರುವ ಭರವಸೆಯನ್ನು ಕಾಂಗ್ರೆಸ್ ನೀಡುತ್ತಿದೆ. ಇದಕ್ಕೆ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು. ಈಗಾಗಲೇ ರಾಜ್ಯ ಸರ್ಕಾರಗಳು ನಗದು ಕೊಡುಗೆಯನ್ನು ನೀಡಲು ಆರಂಭಿಸಿದ್ದು, ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಮತ್ತು ರಾಜಾಸ್ತಾನ ಸರ್ಕಾರಗಳಿಗೆ ನೋಟಿಸ್ ನೀಡಿದೆ. ಮಧ್ಯಪ್ರದೇಶ ಮತ್ತು ರಾಜಾಸ್ಥಾನದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಆರ್‌ಬಿಐ ಎಚ್ಚರಿಸಿದೆ. ಆದರೂ ಜನರಿಗೆ ಆಮಿಷವೊಡ್ಡುವುದು ನಿಂತಿಲ್ಲ. ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಈ ಆಮಿಷಗಳ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನೀಡಬಹುದು.
ಇವುಗಳ ನಡುವೆ ಬಿಜೆಪಿ ಸರ್ಕಾರ ಮಹಿಳೆಯರಿಗೆ ಮೀಸಲಾತಿ ನೀಡುವ ಕಾಯ್ದೆಯನ್ನು ಜಾರಿಗೆ ತಂದಿದೆ. ಇದು ಈಗ ಎಲ್ಲ ಕಡೆ ಚರ್ಚೆಗೆ ಗುರಿಯಾಗಿದೆ. ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ನೀಡಿಲ್ಲ ಎಂಬ ಆರೋಪ ಪ್ರಮುಖವಾಗಿ ಕೇಳಿಬಂದಿದೆ. ಆದರೂ ಮಹಿಳೆಯರಿಗೆ ಅವಕಾಶ ಕಲ್ಪಿಸುವ ಕಾಯ್ದೆಗೆ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಇದಾದ ಮೇಲೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾತಿಸಮೀಕ್ಷೆ ಪ್ರಕಟಿಸಿ ಅತಿ ಹಿಂದುಳಿದವರಿಗೆ ಉತ್ತಮ ಅವಕಾಶ ಸಿಗುವಂತೆ ಮಾಡಿ ಎಲ್ಲ ರಾಜ್ಯಗಳಲ್ಲಿ ಜಾತಿ ಸಮೀಕ್ಷೆಗೆ ಒತ್ತಾಯ ಕೇಳಿ ಬರುವಂತೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಜಾತಿ ಸಮೀಕ್ಷೆಗೆ ಒಲುವು ತೋರಿಲ್ಲ. ಇದೂ ಕೂಡ ಲೋಕಸಭೆಗೆ ಮುನ್ನ ತೀರ್ಮಾನವಾಗಬೇಕಾದ ಸಮಸ್ಯೆ.
ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮೋದಿ ವರ್ಚಸ್ಸಿನ ಮೇಲೆ ಚುನಾವಣೆ ಎದುರಿಸಿತು. ಈಗಲೂ ಪಂಚ ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಕಂಡುಬಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಆಯಾ ಸರ್ಕಾರಗಳ ವಿರುದ್ಧ ಪ್ರತಿರೋಧ ಸಾಕಷ್ಟು ಕಂಡು ಬಂದಿದೆ. ಆಡಳಿತ ಪಕ್ಷದೊಳಗೆ ಬಹಿರಂಗವಾಗಿ ಗುಂಪುಗಾರಿಕೆ ತಲೆಎತ್ತಿದೆ. ಇದು ಎಲ್ಲ ರಾಜಕೀಯ ಪಕ್ಷಗಳ ಹೈಕಮಾಂಡ್‌ಗೆ ತಲೆನೋವಾಗಿದೆ. ತೆಲಂಗಾಣದಲ್ಲಿ ಮಾತ್ರ ಸ್ಥಳೀಯ ಪಕ್ಷ ಆಡಳಿತದಲ್ಲಿರುವುದರಿಂದ ಅಲ್ಲಿ ಹೈಕಮಾಂಡ್ ಸಮಸ್ಯೆ ಇಲ್ಲ. ಇನ್ನು ಮಿಜೋರಾಂನಲ್ಲಿ ಆದಿವಾಸಿಗಳ ಧ್ವನಿ ಪ್ರಬಲವಾಗಿರುವುದರಿಂದ ಇತರ ಪಕ್ಷಗಳಿಗೆ ಒಲವು ಕಡಿಮೆ.
ರಾಷ್ಟ್ರೀಯ ಮಟ್ಟದಲ್ಲಿ ಹೊಸದಾಗಿ ರಚನೆಗೊಂಡಿದ್ದು ಇಂಡಿಯಾ ಒಕ್ಕೂಟದ ಪರೀಕ್ಷೆ ಈಗ ಪಂಚರಾಜ್ಯಗಳಲ್ಲಿ ನಡೆಯಲಿದೆ. ಮೊದಲನೆಯದಾಗಿ ಟಿಕೆಟ್ ಹಂಚಿಕೆಯಲ್ಲೇ ಸಮಸ್ಯೆಗಳು ತಲೆದೋರಲಿವೆ. ಸ್ಥಳೀಯ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಬೇಡಿಕೆಗಳಿಗೆ ಬೆಲೆ ಕೊಡುವುದು ಕಡಿಮೆ. ರಾಷ್ಟ್ರೀಯ ಪಕ್ಷಗಳೇ ಸ್ಥಳೀಯರ ಬೇಡಿಕೆಗಳಿಗೆ ತಲೆಬಾಗಬೇಕಾದ ಪರಿಸ್ಥಿತಿ ಬಂದಿದೆ. ಮೋದಿ ವರ್ಚಸ್ಸು ಕಡಿಮೆಯಾಗಿರುವುದು ಬಹಿರಂಗಗೊಂಡಿದ್ದರೂ ಪರ್ಯಾಯ ವ್ಯಕ್ತಿ ಕಂಡು ಬರುತ್ತಿಲ್ಲ ಎಂಬುದು ಸ್ಪಷ್ಟ. ಇಂಡಿಯಾ ಒಕ್ಕೂಟ ಮತ್ತು ರಾಹುಲ್ ಗಾಂಧಿ ನೇತೃತ್ವಕ್ಕೆ ಇದು ಅಗ್ನಿಪರೀಕ್ಷೆಯಾಗಲಿದೆ. ಸಾಮಾನ್ಯವಾಗಿ ದಕ್ಷಿಣದಲ್ಲಿ ಅನ್ವಯಿಸುವ ಸೂತ್ರ ಉತ್ತರದಲ್ಲಿ ಕೆಲಸ ಮಾಡುವುದಿಲ್ಲ. ಉತ್ತರದ ಜನ ಆಸಕ್ತಿ ತೋರುವ ವಿಷಯಗಳೇ ಬೇರೆ. ಹೀಗಾಗಿ ಫಲಿತಾಂಶವೂ ಒಂದೇ ಇರುವುದು ಕಷ್ಟ.

Exit mobile version