ಹಾವೇರಿ: ಥಾಯ್ಲೆಂಡ್ ದೇಶದ ಬ್ಯಾಂಕಾಕ್‌ಗೆ ತೆರಳಿರುವ ಜಿಲ್ಲೆಯ ಯುವಕರು ಸೇರಿದಂತೆ ರಾಜ್ಯದ ವಿವಿಧ ಭಾಗದ 22 ಜನರ ತಂಡ ಸುರಕ್ಷಿತವಾಗಿದೆ.
ಶುಕ್ರವಾರ ಬೆಳಗ್ಗೆವರೆಗೂ ಬ್ಯಾಂಕಾಕ್‌ನಲ್ಲಿ ನೆಲೆಸಿದ್ದರು. ಶುಕ್ರವಾರ ಬೆಳಂಬೆಳಗ್ಗೆ ವೈಲ್ಡ್ ಸಫಾರಿಗಾಗಿ ಹೋಗಿದ್ದಾರೆ. ಆ ವೇಳೆ ಇವರು ನೆಲೆಸಿದ್ದ ಪ್ರದೇಶದಲ್ಲೇ ಭೂಕಂಪವಾಗಿದ್ದು, ದೇವರ ದಯೆಯಿಂದ ಸುರಕ್ಷಿತರಾಗಿದ್ದೇವೆ ಎಂದು ಪ್ರವಾಸದಲ್ಲಿರುವ ಜಿಲ್ಲೆಯ ಯುವಕ ಸಂಕನಗೌಡ ದೇವಿಕೊಪ್ಪ ವಿಡಿಯೋ ಸಂದೇಶ ಕಳುಹಿಸಿದ್ದಾರೆ.
ಥಾಯ್ಲೆಂಡ್‌ನ ಕಾಲಮಾನ 12ಗಂಟೆಗೆ ಭೂಕಂಪವಾಗಿದೆ. ನಾವು ಭೂಕಂಪ ಆಗಿರುವ ಸ್ಥಳದಲ್ಲೇ ರೂಮ್ ಮಾಡಿಕೊಂಡು ನೆಲೆಸಿದ್ದೇವು. ಶುಕ್ರವಾರ ಬೆಳಗ್ಗೆ ಸಫಾರಿಗೆ ಹೋದಾಗ ಭೂಕಂಪ ಸಂಭವಿಸಿದೆ. ನಮಗೂ ಇದರ ಅನುಭವ ಆಗಿದೆ. ಬ್ಯಾಂಕಾಕ್‌ಗೆ ಸದ್ಯ ಪ್ರವೇಶ ನಿರ್ಬಂಧಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಅನಾಹುತವಾಗಿರುವ ಮಾಹಿತಿ ಸಿಕ್ಕಿದೆ. ನಾವು ಸದ್ಯ ಬ್ಯಾಂಕಾಕ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸುರಕ್ಷಿತವಾಗಿದ್ದೇವೆ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.