ಹುಬ್ಬಳ್ಳಿ: ಹಿಂದೂ, ಹಿಂದೂತ್ವದ ಬಗ್ಗೆ ಕಾಂಗ್ರೆಸ್ ನಾಯಕರಿಗಿರುವ ಅಸಡ್ಡೆ ಮನೋಭಾವ, ವರ್ತನೆ ಇದೇ ರೀತಿ ಮುಂದುವರಿದಲ್ಲಿ ಹಿಂದೂಗಳು ದಂಗೆ ಏಳುವ ಕಾಲ ದೂರವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ ಶೆಟ್ಟರ್ ಎಚ್ಚರಿಸಿದರು.
`ಮೋದಿ, ಅಮಿತ್ ಶಾ ಪುಣ್ಯಸ್ನಾನ ಮಾಡಿದರೆ ಪಾಪ ಕಡಿಮೆ ಆಗಲ್ಲ’ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬುಧವಾರ ತಿರುಗೇಟು ನೀಡಿದ ಅವರು, ಅಲ್ಪಸಂಖ್ಯಾತರ ಮತಕ್ಕಾಗಿ ಕಾಂಗ್ರೆಸ್‌ನವರು ಹೀಗೆ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ಪ್ರಯಾಗರಾಜ್‌ನಲ್ಲಿ ೧೪೪ ವರ್ಷಗಳ ನಂತರ ಕುಂಭ ಮೇಳ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಮುಸ್ಲಿಮರು ಮೆಕ್ಕಾ-ಮದೀನಾಕ್ಕೆ ಹೋಗುವುದರಿಂದ ಅವರ ಬಡತನ, ಪಾಪ ತೊಳೆದು ಹೋಗುತ್ತದೆಯೇ ಎಂದು ಖರ್ಗೆ ಪ್ರಶ್ನೆ ಮಾಡಲಿ ನೋಡೋಣ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ದೇಶದಲ್ಲಿ ಈಗಾಗಲೇ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ತಕ್ಷಣವೇ ಮಲ್ಲಿಕಾರ್ಜುನ ಖರ್ಗೆ ಕ್ಷಮಾಪಣೆ ಕೇಳಬೇಕು. ಮೆಕ್ಕಾ-ಮದೀನಾಕ್ಕೆ ಹೋಗುವವರಿಗೆ ಸರ್ಕಾರ ಸೌಲಭ್ಯ ನೀಡುತ್ತಿದೆ. ಆದರೆ, ಹಿಂದೂಗಳು ತಾವೇ ಖರ್ಚು ಮಾಡಿಕೊಂಡು ಹೋಗುತ್ತಾರೆ. ಹೀಗಿರುವಾಗ ಅವರ ಧಾರ್ಮಿಕ ಭಾವನೆಗೆ ಧಕ್ಕೆ ತರಲು ನೀವ್ಯಾರು ಎಂದು ಪ್ರಶ್ನಿಸಿದರು.
ಮುಸಲ್ಮಾನ್, ಕ್ರಿಶ್ಚಿಯನ್ನರಿಗೆ ಹಲವಾರು ದೇಶಗಳಿವೆ. ಆದರೆ, ಭಾರತೀಯರಿಗೆ ಹಿಂದೂ ರಾಷ್ಟç ಒಂದೇ. ಇದು ಹೀಗೆ ಮುಂದುವರೆದಲ್ಲಿ ಕಾಂಗ್ರೆಸ್ ವಿರುದ್ಧ ಹಿಂದೂಗಳು ವಿರುದ್ಧ ದಂಗೆ ಏಳಲಿದ್ದಾರೆ ಎಂದರು.