ರಾಯಚೂರು: ತಾಲ್ಲೂಕಿನ ಆತ್ಕೂರು ಗ್ರಾಮದಲ್ಲಿರುವ ಕೃಷ್ಣಾನದಿ ದಡದ ಮೇಲೆ ಮೊಸಳೆಗಳ ಹಿಂಡು ಕಂಡು ಬಂದಿದ್ದು ಕೃಷ್ಣಾನದಿ ತೀರದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದಲೂ ತುಂತುರ ಮಳೆ ಸುರಿಯುತ್ತಿದೆ. ರಾಯಚೂರು ತಾಲ್ಲೂಕಿನ ಯಾಪಲದಿನ್ನಿ ಹೋಬಳಿಯ ಆತ್ಕೂರು ಬಳಿ ಕೃಷ್ಣಾನದಿಯಲ್ಲಿ ಏಕಕಾಲಕ್ಕೆ ಭಾರಿ ಸಂಖ್ಯೆಯಲ್ಲಿ ಮೊಸಳೆಗಳು ಬಂದಿವೆ. ನದಿಯ ತಟದಲ್ಲಿ ಬಿಡಾರ ಹೂಡಿರುವ ಮೊಸಳೆಗಳ ದಂಡು ನೋಡಿ ಜನರು ಬೆಚ್ಚಿ ಬಿದ್ದಿದ್ದಾರೆ. ನದಿಪಾತ್ರದ ಪ್ರದೇಶವಾದ ಆತ್ಕೂರು ಹಾಗೂ ಡಿ.ರಾಂಪುರದಿಂದ ಗ್ರಾಮದ ಮೂಲಕ ನಡುಗಡ್ಡೆಯ ಐತಿಹಾಸಿಕ ದತ್ತಾತ್ರೇಯ ದೇವಸ್ಥಾನಕ್ಕೆ ತೆಪ್ಪದ ಮೂಲಕ ಭಕ್ತರು ತೆರಳಲುವಾಗ ಮೊಸಳೆಗಳ ಹಿಂಡು ಕಂಡು ಬೆಚ್ಚಿ ಬಿದ್ದಿದ್ದಾರೆ. ಭಕ್ತರು ತಮ್ಮ ಮೊಬೈಲ್‌ನಲ್ಲಿ ಮಂಗಳವಾರ ಸೆರೆಹಿಡಿದಿದ್ದು ಈಗ ವೈರಲ್ ಆಗುತ್ತಿದೆ. ಆತ್ಕೂರು ಗ್ರಾಮದಿಂದ ನಡುಗಡ್ಡೆಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಇದರಿಂದಾಗಿ ತೆಪ್ಪವನ್ನು ನಡುಗಡ್ಡೆಯ ಗ್ರಾಮಸ್ಥರು ಅವಲಂಬಿತರಾಗಿದ್ದಾರೆ. ಮೊಸಳೆಗಳ ಹಿಂಡು ಕಂಡಬಂದ ಹಿನ್ನೆಲೆಯಲ್ಲಿ ಜನರು ಆತಂಕಗೊಂಡಿದ್ದಾರೆ.