ರಾಯಚೂರು: ಸಿಂಧನೂರು ತಾಲೂಕಿನಲ್ಲಿ ನಡೆದ ಒಂದೇ ಕುಟುಂಬದ 5 ಜನರ ಕೊಲೆ ಹಾಗೂ ಇಬ್ಬರ ಮೇಲೆ ಕೊಲೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾಯಚೂರು ಜಿಲ್ಲಾ 3ನೇ ಹೆಚ್ಚುವರಿ ಮತ್ತು ಸೆಷನ್ ನ್ಯಾಯಾಲಯ ಸಿಂಧನೂರು ಪೀಠಾಸೀನ ನ್ಯಾಯಾಧೀಶರಾದ ಬಿ.ಬಿ ಜಕಾತಿ ಅವರು ವಿಚಾರಣೆ ನಡೆಸಿ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ ಹಾಗೂ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ: 2020, ಜುಲೈ 11ರಂದು ತನ್ನ ಮಗಳಾದ ಮಂಜುಳಾಳನ್ನು ಮೌನೇಶ ಎಂಬ ಯುವಕ ಪ್ರೀತಿಸಿದ ಎಂಬ ಕಾರಣಕ್ಕೆ ಜಿಲ್ಲೆಯ ಸಿಂಧನೂರು ನಗರದ ಸುಕಾಲಪೇಟೆಯ ಬಡಾವಣೆಯ ಹಿರೇಲಿಂಗೇಶ್ವರ ಕಾಲೋನಿಯಲ್ಲಿ ಯುವಕನ ಮನೆಗೆ ನುಗ್ಗಿ ಆತನ ತಂದೆ ಈರಪ್ಪ, ಈರಪ್ಪನ ಪತ್ನಿ ಸುಮಿತ್ರಮ್ಮ, ಮಕ್ಕಳಾದ ನಾಗರಾಜ, ಹನುಮೇಶ ಹಾಗೂ ಮಗಳು ಶ್ರೀದೇವಿ ಅವರನ್ನು ಆರೋಪಿಗಳಾದ ಸಣ್ಣ ಫಕೀರಪ್ಪ ತಂದೆ ಸೋಮಪ್ಪ ಕೊನದವರ, ಅಂಬಣ್ಣ ಸೋಮಪ್ಪ ಕೋನದವರ, ಸೋಮಶೇಖರ ತಂದೆ ಹಿರೇಫಕೀರಪ್ಪ ಸೇರಿಕೊಂಡು ಅಕ್ರಮ ಕೂಟ ರಚಿಸಿ ಬಡಿಗೆಗಳಿಂದ ಹೊಡೆದು 5 ಜನರನ್ನು ಕೊಲೆ ಮಾಡಿದ್ದರು.
4ನೇ ಆರೋಪಿ ರೇಖಾ ಗಂಡ ಸಣ್ಣ ಫಕೀರಪ್ಪ, ಗಂಗಮ್ಮ ಗಂಡ ತಂದೆ ಅಂಬಣ್ಣ ಹೆಬ್ಬಾಳ, ದೊಡ್ಡ ಫಕೀರಪ್ಪ ಸೋಮಪ್ಪ ಕೊನದವರ, ಹನುಮಂತಪ್ಪ ಸೋಮಪ್ಪ, ಹೊನೂರಪ್ಪ ಸೋಮಪ್ಪ, ಬಸವಲಿಂಗಪ್ಪ ದೊಡ್ಡ ಫಕೀರಪ್ಪ, ಅಮರೇಶ ತಂದೆ ಮಲ್ಲಪ್ಪ, ಬಸಬಲಿಂಗಪ್ಪ ದೊಡ್ಡ ಫಕೀರಪ್ಪ ಅವರು ಕೊಲೆಯಲ್ಲಿ ಭಾಗಿಯಾಗಿದ್ದರು.
ಘಟನೆಯಲ್ಲಿ ಮೃತ ಈರಪ್ಪನ ಸೊಸೆ ರೇವತಿ ಹಾಗೂ ಮಗಳು ತಾಯಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸಿಪಿಐ ಬಾಲಚಂದ್ರ ಲಖ್ಕಂ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಸಾಕ್ಷಿಗಳನ್ನು ಸಾಕ್ಷಿ, ದಸ್ತಾವೇಜುಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ಆರೋಪಿ ಸಣ್ಣ ಫಕೀರಪ್ಪ, ಅಂಬಣ್ಣ ಹಾಗೂ ಸೋಮಶೇಖರ ಅವರನ್ನು ಗಲ್ಲು ಶಿಕ್ಷೆ ಹಾಗೂ 47 ಸಾವಿರ ರೂಪಾಯಿ ದಂಡ ಹಾಗೂ ಉಳಿದ 9 ಆರೋಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 97,500 ರೂ. ದಂಡ ವಿಧಿಸಿ ತೀರ್ಪು ನೀಡಿ ಆದೇಶಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜನ ಆರ್ ಎ.ಗಡಕರಿ ವಾದ ಮಂಡಿಸಿದ್ದರು.