ಕಲಬುರಗಿ: ಉಡುಪಿಯಲ್ಲಿನ ಕೃಷ್ಣಮಠದ ಜಾಗೆ ಯಾರೂ ಕೊಟ್ಟದ್ದಲ್ಲ. ಅದು ಸ್ವತಃ ಶ್ರೀಕೃಷ್ಣನೇ ಸಂಪಾದನೆ ಮಾಡಿರುವಂಥದು, ಯಾರೂ ಕೊಟ್ಟಿಲ್ಲ’ ಎಂದು ಉಡುಪಿಯ ಪಲಿಮಾರು ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ರಾಮ ಮಂದಿರದಲ್ಲಿ ಗುರುವಾರ ಗೋಶಾಲೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಸಂಯುಕ್ತ ಕರ್ನಾಟಕ ದೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆಗೆ ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಕಲ್ಪನಾ ಸಾಮ್ರಾಜ್ಯದಲ್ಲಿರುವವರು ಮನಬಂದಂತೆ ಮಾತನಾಡುತ್ತಿದ್ದಾರೆ. ಕೃಷ್ಣಮಠದ ಜಾಗೆ ಅನಂತೇಶ್ವರ ದೇಗುಲಕ್ಕೆ ಸೇರಿದ್ದು. ಇದು ಪರಶುರಾಮದೇವರ ಭೂಮಿ. ಈ ಜಾಗೆಯ ಮೇಲೆ ಯಾರಿಗೂ ಹಕ್ಕಿಲ್ಲ. ಶ್ರೀಕೃಷ್ಣನಿಗೆ ಯಾರ ಔದಾರ್ಯವೂ ಬೇಕಿಲ್ಲ. ಯಾವುದೇ ಮೂಲ ಇಲ್ಲದೇ ಕಲ್ಪನೆಯಿಂದ ಈ ರೀತಿ ಹೇಳಬಾರದು. ಯಾರನ್ನೋ ಸಂತೋಷಪಡಿಸಲು ಮಾತನಾಡಬಾರದು. ಈಗ ಇದ್ದಕ್ಕಿದ್ದ ಹಾಗೆ ಯಾವುದೇ ದಾಖಲೆ ಇಲ್ಲದೆ ಹೇಳಿಕೆ ನೀಡಿದ್ದಾರೆ. ಇಂಥದಕ್ಕೆಲ್ಲ ಯಾರೂ ಕಿವಿಗೊಡಬಾರದು ಎಂದು ಶ್ರೀಗಳು ಹೇಳಿದರು.
ನಮ್ಮ ಭಾರತದ ಸನಾತನ ಸಂಸ್ಕೃತಿಯನ್ನು ಬುಡಮೇಲು ಯಾರಿಂದಲೂ ಸಾಧ್ಯವಿಲ್ಲ. ಬೇರೆ ಯಾವುದೇ ಧರ್ಮದವರೂ ಕೃಷ್ಣಮಠಕ್ಕೆ ಜಾಗೆ ಕೊಟ್ಟಿಲ್ಲ. ಇದು ಸಾರ್ವಕಾಲಿಕ ಸತ್ಯ. ಈ ಜಾಗೆ ಯಾರಿಂದಲೂ ಬಳುವಳಿಯಾಗಿ ಬಂದಿಲ್ಲ. ನಾವು ಕೊಡುವವರೇ ಹೊರತು ತೆಗೆದುಕೊಳ್ಳುವವರಲ್ಲ ಎಂದು ಸ್ವಾಮೀಜಿ ಮಾರ್ಮಿಕವಾಗಿ ನುಡಿದರು. ಪಲಿಮಾರು ಮಠದ ಉತ್ತರಾಧಿಕಾರಿಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದಂಗಳವರು ಇದ್ದರು.