Home ತಾಜಾ ಸುದ್ದಿ ಅಯೋಧ್ಯೆಗೆ ಭೇಟಿ ಬೇಡ ಸಚಿವರಿಗೆ ಪಿಎಂ ಸೂಚನೆ

ಅಯೋಧ್ಯೆಗೆ ಭೇಟಿ ಬೇಡ ಸಚಿವರಿಗೆ ಪಿಎಂ ಸೂಚನೆ

0

ನವದೆಹಲಿ: ಜ.೨೨ ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಬೆನ್ನಲ್ಲೇ ಅಯೋಧ್ಯೆಯಲ್ಲಿ ಭಕ್ತರ ಸಂದಣಿ ಹೆಚ್ಚಿರುವ ಹಿನ್ನೆಲೆಯಲ್ಲಿ ತಕ್ಷಣವೇ ದೇವಾಲಯ ನಗರಿಗೆ ಭೇಟಿ ನೀಡದಂತೆ ಕೇಂದ್ರ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ತಮ್ಮ ಸಹೋದ್ಯೋಗಿಗಳಿಗೆ ಈ ಬಗ್ಗೆ ಸೂಚನೆ ನೀಡಿರುವ ಪ್ರಧಾನಿ, ಪ್ರತಿದಿನ ಲಕ್ಷಾಂತರ ಜನರು ಬಾಲರಾಮನ ದರ್ಶನಕ್ಕೆ ಬರುತ್ತಿರುವುದರಿಂದ ಗಣ್ಯಾತಿಗಣ್ಯರ ಭೇಟಿಗೆ ಸಮಸ್ಯೆಯಾಗಿದೆ. ಹೀಗಾಗಿ ಜನಸಂದಣಿ ತಗ್ಗಿದ ನಂತರ ಮಾರ್ಚ್ನಲ್ಲಿ ರಾಮಲಲ್ಲಾ ದರ್ಶನಕ್ಕೆ ತೆರಳುವಂತೆ ಸಚಿವರಿಗೆ ಮೋದಿ ಸೂಚಿಸಿದ್ದಾರೆ.
ಶೀಘ್ರ ಮುಖ್ಯಮಂತ್ರಿಗಳ ಭೇಟಿ: ಇದೇ ವೇಳೆ, ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಸೋಮವಾರದ ಮಂದಿರ ಉದ್ಘಾಟನೆ ವೇಳೆ ಪಕ್ಷದ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಬಿಟ್ಟರೆ ಬಿಜೆಪಿಯ ಇತರ ಮುಖ್ಯಮಂತ್ರಿಗಳು ಭಾಗವಹಿಸಿರಲಿಲ್ಲ. ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗಿಯಾಗಿರಲಿಲ್ಲ. ಎಲ್ಲರೂ ತಮ್ಮ ರಾಜ್ಯಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

Exit mobile version