Home News ಕೂಡ್ಲಿಗಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವೆ

ಕೂಡ್ಲಿಗಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವೆ

ಬಳ್ಳಾರಿ: ಬಳ್ಳಾರಿ ಗ್ರಾಮೀಣ ಕ್ಷೇತ್ರ ನನಗೆ ರಾಜಕೀಯ ಜನ್ಮಭೂಮಿ. ಆದರೆ ಮುಂಬರುವ ಚುನಾವಣೆಯಲ್ಲಿ ನಾನು ವಿಜಯನಗರದ ಕೂಡ್ಲಗಿ ಕ್ಷೇತ್ರದಿಂದ ಸ್ಪರ್ಧೆ ಮಾಡುವೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಹಾವಂಭಾವಿಯ ತಮ್ಮ ನಿವಾಸದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯಾರು ಏನು ಹೇಳಿದರೂ ನಾನು ಈಗಾಗಲೇ ನಿರ್ಧಾರ ಮಾಡಿದ್ದೇನೆ. ಕೂಡ್ಲಗಿ ಕ್ಷೇತ್ರವನ್ನು ಈಗಾಗಲೇ ಆಯ್ಕೆ ಮಾಡಿಕೊಂಡಿದ್ದೇನೆ. ಬಿಜೆಪಿ ನಾಯಕರು ಇದಕ್ಕೆ ಸಮ್ಮತಿಸುವ ವಿಶ್ವಾಸವಿದೆ ಎಂದ ಬಿ.ಶ್ರೀರಾಮುಲು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಮೊಟ್ಟೆ ವಿತರಿಸಲು ಕೂಡ ಅನುದಾನವಿಲ್ಲ. ಆದ್ದರಿಂದ, ಕಾಂಗ್ರೆಸ್‌ಗೆ ಮುಂದಿನ ಭವಿಷ್ಯವಿಲ್ಲ. ಮಧ್ಯಂತರ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಿದೆ ಎಂದರು.
ನಗರದ ಮಹಾನಗರ ಪಾಲಿಕೆಯಲ್ಲಿ ಒನ್ ಸೈಡ್ ಆಡಳಿತ ನಡೆಸುತ್ತಿದೆ. ಕೇವಲ ಕಾಂಗ್ರೆಸ್ ಸದಸ್ಯರಿಗೆ ಮಾತ್ರ ಅನುದಾನ ನೀಡುತ್ತಿದ್ದು, ಬಿಜೆಪಿ ಸದಸ್ಯರಿಗೆ ನೀಡುತ್ತಿಲ್ಲ. ನಗರದ ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಪಾಲಿಕೆ ಸದಸ್ಯರಾದ ಸುರೇಖಾ, ಹನುಮಂತಪ್ಪ, ಕೆ. ಹನುಮಂತಪ್ಪ, ಮುಖಂಡರಾದ ವೀರಶೇಖರರೆಡ್ಡಿ, ಶ್ರೀಧರ ಇದ್ದರು.
ನಾಗೇಂದ್ರ ಮತ್ತೆ ಜೈಲಿಗೆ
ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದಾರೆ. ಈಗಾಗಲೇ ಇಡಿಗೆ ಡಿಜಿಟಿಲ್ ಸಾಕ್ಷ್ಯಾಧಾರಗಳು ದೊರೆತಿವೆ. ಕಾನೂನು ಕುಣಿಕೆಯಲ್ಲಿ ಎಲ್ಲರೂ ಸಿಕ್ಕಿಬಿದ್ದಿದ್ದಾರೆ. ಮತ್ತೊಮ್ಮೆ ಶಾಸಕ ಬಿ.ನಾಗೇಂದ್ರ ಜೈಲಿಗೆ ಸೇರಲಿದ್ದಾರೆ ಎಂದು ಬಿ.ಶ್ರೀರಾಮುಲು ಇದೇ ವೇಳೆ ಹೇಳಿದರು.
ನಾನೇನೂ ಹೇಳಲ್ಲ
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಕುರ್ಚಿ ಖಾಲಿಯಿಲ್ಲ. ಇನ್ನೂ ಒಂದೂವರೆ ವರ್ಷದ ಅಧಿಕಾರ ಅವಧಿಯಿದೆ. ಯಾರು ಬದಲಾಯಿಸುವಂತೆ ಕೇಂದ್ರ ನಾಯಕರ ಜತೆ ಚರ್ಚಿಸಿಲ್ಲ ಎಂದ ಬಿ.ಶ್ರೀರಾಮುಲು ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆ ತಪ್ಪಿದರೆ ಬಿಜೆಪಿಗೆ ಬರಲಿದ್ದಾರೆಯೇ? ಬಿಜೆಪಿ ಅವರನ್ನು ಸಿಎಂ ಮಾಡಲಿದೆಯೇ? ಎನ್ನುವ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಬಿ.ಶ್ರೀರಾಮುಲು ಈ ಬಗ್ಗೆ ನಾನೇನೂ ಹೇಳಲ್ಲ. ಕಾದು ನೋಡೋಣ. ನಮ್ಮ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಉತ್ತರಿಸಿದರು.

Exit mobile version