ಬೆಂಗಳೂರು: ಕರ್ನಾಟಕ ಸರ್ಕಾರ ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಬದಲಾವಣೆ ಮಾಡಿದೆ. ಕೆಲವೇ ದಿನಗಳ ಹಿಂದೆ ಎಂ. ಮಹೇಶ್ವರ ರಾವ್ ನಮ್ಮ ಮೆಟ್ರೋ ಉಸ್ತುವಾರಿ ನೋಡಿಕೊಳ್ಳುವ ಬಿಎಂಆರ್‌ಸಿಎಲ್ ಎಂಡಿಯಾಗಿ ನೇಮಗೊಂಡಿದ್ದರು.
ಶುಕ್ರವಾರ ಸರ್ಕಾರ ಐಎಎಸ್ ಅಧಿಕಾರಿ ವರ್ಗಾವಣೆ ಕುರಿತು ಆದೇಶವನ್ನು ಹೊರಡಿಸಿದೆ. ಎಂ. ಮಹೇಶ್ವರ ರಾವ್ ಅವರನ್ನು ತಕ್ಷಣದಿಂದ ಬಿಎಂಆರ್‌ಸಿಎಲ್ ಎಂಡಿ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.
ಡಾ. ರವಿಶಂಕರ್ ಜೆ. ಐಎಎಸ್ (ಕೆಎನ್:2001) ಬಿಎಂಆರ್‌ಸಿಎಲ್ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅವರು ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆ, ಬೆಂಗಳೂರು ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಏಪ್ರಿಲ್‌ನಲ್ಲಿ ಎಂ. ಮಹೇಶ್ವರ ರಾವ್ ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರಾಗಿ ನೇಮಕ ಮಾಡಲಾಗಿತ್ತು. ಅಲ್ಲದೇ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಹೆಚ್ಚುವರಿ ಹೊಣೆಯನ್ನು ಅವರಿಗೆ ನೀಡಲಾಗಿತ್ತು.
ನಮ್ಮ ಮೆಟ್ರೋ ಉಸ್ತುವಾರಿ ನೋಡಿಕೊಳ್ಳಲು ಪೂರ್ಣ ಪ್ರಮಾಣದ ಎಂಡಿ ಬೇಕು ಎಂಬ ಬೇಡಿಕೆ ಇತ್ತು. ಈ ಹಿನ್ನಲೆಯಲ್ಲಿ ಎಂ. ಮಹೇಶ್ವರ ರಾವ್ ಅವರನ್ನು ಆ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.
ಬಿಎಂಆರ್‌ಸಿಎಲ್ 8ನೇ ವ್ಯವಸ್ಥಾಪಕ ನಿರ್ದೇಶಕರಾಗಿ ಎಂ. ಮಹೇಶ್ವರ ರಾವ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಆದರೆ ಈಗ ಅವರಿಗೆ ಬಿಬಿಎಂಪಿಯ ಆಡಳಿತ ಹೊಣೆಯನ್ನು ಸಂಪೂರ್ಣವಾಗಿ ನೀಡಿ, ಬಿಎಂಆರ್‌ಸಿಎಲ್ ಎಂಡಿ ಹುದ್ದೆಯಿಂದ ಬಿಡುಗಡೆ ಮಾಡಿ ಆದೇಶಿಸಿದೆ.
ಎಂ. ಮಹೇಶ್ವರ ರಾವ್ ಕರ್ನಾಟಕ ಕೇಡರ್‌ನ 1995ನೇ ಬ್ಯಾಚ್ ಐಎಎಸ್ ಅಧಿಕಾರಿ. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಂಜುಂ ಪರ್ವೇಜ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾವಣೆ ಮಾಡಿದ ಬಳಿಕ 2024ರ ಜನವರಿಯಲ್ಲಿ ಹುದ್ದೆಯ ನಿರೀಕ್ಷೆಯಲ್ಲಿದ್ದ ಎಂ. ಮಹೇಶ್ವರ ರಾವ್ ಅವರನ್ನು ಬಿಎಂಆರ್‌ಸಿಎಲ್ ಎಂಡಿಯಾಗಿ ನೇಮಕ ಮಾಡಲಾಗಿತ್ತು.
ಈ ಹಿಂದೆ ರಾಕೇಶ್ ಸಿಂಗ್ ಮೂರು ತಿಂಗಳು ಬಿಎಂಆರ್‌ಸಿಎಲ್ ಎಂಡಿಯಾಗಿ ಕೆಲಸ ಮಾಡಿ ವರ್ಗಾವಣೆಗೊಂಡಿದ್ದರು. ಆಗ ಬಿಎಂಆರ್‌ಸಿಎಲ್‌ಗೆ ಪೂರ್ಣಾವಧಿ ಎಂಡಿ ಬೇಕು ಎಂದು ಬೇಡಿಕೆ ಇಡಲಾಗಿತ್ತು. ಈ ಕುರಿತು ಬಿಜೆಪಿ ಸಂಸದರು ಕೇಂದ್ರ ಸರ್ಕಾರಕ್ಕರ ಪತ್ರವನ್ನು ಸಹ ಬರೆದಿದ್ದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬಿಎಂಆರ್‌ಸಿಎಲ್‌ಗೆ ಪೂರ್ಣಾವಧಿ ಎಂಡಿ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಕೇಂದ್ರ ನಗರ ವ್ಯವಹಾರಗಳ ಖಾತೆ ಸಚಿವ ಹರದೀಪ್ ಸಿಂಗ್ ಪುರಿಗೆ ಪತ್ರವನ್ನು ಬರೆದಿದ್ದರು. ಪೂರ್ಣಾವಧಿ ಎಂಡಿ ಇಲ್ಲವಾದಲ್ಲಿ ನಮ್ಮ ಮೆಟ್ರೋ ಕಾಮಗಾರಿಗಳು ಮತ್ತಷ್ಟು ವಿಳಂಬವಾಗಲಿದೆ ಎಂದು ಹೇಳಿದ್ದರು. ಕೇಂದ್ರ ಸರ್ಕಾರ ಈ ಕುರಿತು ಕರ್ನಾಟಕ ಸರ್ಕಾರಕ್ಕೆ ಸೂಚನೆಯನ್ನು ನೀಡಿತ್ತು.
ಆದರೆ ಎಂ. ಮಹೇಶ್ವರ ರಾವ್ ನೇಮಕದ ಬಳಿಕ ಅವರಿಗೆ ಬಿಬಿಎಂಪಿ ಆಯುಕ್ತ ಹುದ್ದೆಯ ಹೆಚ್ಚುವರಿ ಹೊಣೆಯನ್ನು ನೀಡಿತ್ತು. ಈಗ ಸರ್ಕಾರ ಡಾ. ರವಿಶಂಕರ್ ಜೆ. ಅವರನ್ನು ಬಿಎಂಆರ್‌ಸಿಎಲ್ ಎಂಡಿಯಾಗಿ ನೇಮಮಿಸಿ, ಎಂ. ಮಹೇಶ್ವರ ರಾವ್ ಅವರನ್ನು ಬಿಡುಗಡೆಗೊಳಿಸಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗ ಬೊಮ್ಮಸಂದ್ರ-ಆರ್.ವಿ.ರಸ್ತೆ ಉದ್ಘಾಟನೆಗೆ ಬಿಎಂಆರ್‌ಸಿಎಲ್ ತಯಾರಿಯನ್ನು ನಡೆಸುತ್ತಿದೆ. ಇದು ನಗರದ ಪ್ರಮುಖ ಮೆಟ್ರೋ ಮಾರ್ಗವಾಗಿದ್ದು, ಎಲೆಕ್ಟ್ರಾನಿಕ್ ಸಿಟಿಗೆ ನಮ್ಮ ಮೆಟ್ರೋ ಸಂಪರ್ಕ ಸಿಗಲಿದೆ. ಇಂತಹ ಹೊತ್ತಿನಲ್ಲಿಯೇ ಬಿಎಂಆರ್‌ಸಿಎಲ್‌ಗೆ ಹೊಸ ಎಂಡಿ ನೇಮಕಗೊಂಡಿದ್ದಾರೆ.