ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿದೆ. ಈ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಪಕ್ಷಗಳಿಗೆ ಸಖತ್ ಏಟು ಕೊಟ್ಟಿದ್ದಾರೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ನಿತೀಶ್ ಕುಮಾರ್, ಎಲ್ಲಾ ಮನೆಗಳಿಗೆ 125 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ. ನವೆಂಬರ್-ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಘೋಷಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ನಿತೀಶ್ ಕುಮಾರ್ ಪೋಸ್ಟ್ ಹಾಕಿದ್ದು ಈ ಘೋಷಣೆಯಿಂದ1.67 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಆಗಸ್ಟ್ 1, 2025ರಿಂದಲೇ ಈ ಘೋಷಣೆ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ಜುಲೈ ತಿಂಗಳಿನಲ್ಲಿ ರಾಜ್ಯದಲ್ಲಿ ಯಾವುದೇ ಮನೆಯಲ್ಲಿ 125 ಯೂನಿಟ್‌ನಷ್ಟು ವಿದ್ಯುತ್ ಬಳಕೆ ಮಾಡಿದ್ದರೆ ಆಗಸ್ಟ್‌ನಲ್ಲಿ ಬಿಲ್ ಪಾವತಿಸುವ ಅಗತ್ಯವಿಲ್ಲ. ನಾವು ಎಲ್ಲಾ ಗ್ರಾಹಕರಿಗೂ ಕಡಿಮೆ ದರದಲ್ಲಿಯೇ ವಿದ್ಯುತ್ ನೀಡುತ್ತಿದ್ದೇವೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಒನ್ ನೇಷನ್ ಒನ್ ಟ್ಯಾರಿಫ್ ಎಂಬ ಘೋಷಣೆ ಮಾಡಿದ್ದ ಬಿಹಾರದ ದೀರ್ಘ ಅವಧಿಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಗ್ರಿಡ್ ಮೂಲಕ ಅತಿ ಹೆಚ್ಚು ದರವನ್ನು ನೀಡಿ ನಾವು ವಿದ್ಯುತ್ ಖರೀದಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಬಿಹಾರ ರಾಜ್ಯ ಈಗಾಗಲೇ ರಾಜ್ಯದ ಸಂಪೂರ್ಣ ಅನುದಾನದಲ್ಲಿ ಕುಠೀರ ಜ್ಯೋತಿ ಯೋಜನೆ ಅನುಷ್ಠಾನ ಮಾಡುತ್ತಿದೆ. ಮನೆಗಳಿಗೆ ಸೋಲಾರ್ ಪ್ಯಾನಲ್ ಅಳವಡಿಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಇದಾಗಿದೆ. ರಾಜ್ಯದ ಬಡವರಿಗೆ ಇದು ಉತ್ತಮ ಯೋಜನೆಯಾಗಿದೆ ಎಂದು ನಿತೀಶ್ ಹೇಳಿದ್ದಾರೆ.
ಸೋಲಾರ್ ವಿದ್ಯುತ್ ಉತ್ಪಾದನೆಯತ್ತ ಬಿಹಾರ ರಾಜ್ಯ ಸಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯ 10,000 ಮೆಗಾವಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲಿದೆ ಎಂದು ನಿತೀಶ್ ಕುಮಾರ್ ತಮ್ಮ ಪೋಸ್ಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಬಿಹಾರ ಚುನಾವಣೆ ರಾಜಕೀಯ: ಇಂಡಿಯಾ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಿಹಾರ ಚುನಾವಣೆಯಲ್ಲಿ ಎದುರಾಳಿಗಳು. ಮಾಜಿ ಉಪ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಇಂಡಿಯಾ ಮೈತ್ರಿಕೂಟದಲ್ಲಿದ್ದು, ಅವರು ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.
ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟ ಭರ್ಜರಿಯಾಗಿ ಬಿಹಾರ ಚುನಾವಣೆ ತಯಾರಿಯನ್ನು ಆರಂಭಿಸಿವೆ. ಎನ್‌ಡಿಎ ಮೈತ್ರಿಕೂಟ ಗೆದ್ದರೆ ಈ ಬಾರಿ ಬಿಜೆಪಿ ನಿತೀಶ್ ಕುಮಾರ್‌ರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಇಂಡಿಯಾ ಮೈತ್ರಿಕೂಟ ಪ್ರಚಾರವನ್ನು ಮಾಡುತ್ತಿದೆ.
ದೇಶಾದ್ಯಂತ ಬಿಹಾರ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಚುನಾವಣೆ ಫಲಿತಾಂಶದಲ್ಲಿ ನಿತೀಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠೆ ಅಡಗಿದೆ. 2024ರ ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿದ ಪ್ರಮುಖ ಪಕ್ಷದಲ್ಲಿ ಜೆಡಿಯು ಸಹ ಒಂದು.