ಮಂಗಳೂರು: ಹಲವು ದಿನಗಳಿಂದ ಭಾರೀ ಸುದ್ದಿ ಮಾಡುತ್ತಿರುವುದು ಕರ್ಣಾಟಕ ಬ್ಯಾಂಕ್. ಕರ್ನಾಟಕ ಮೂಲದ ಬ್ಯಾಂಕ್ ಕನ್ನಡಿಗನನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಸೋಮವಾರ ನೇಮಕ ಮಾಡಿದೆ.
ರಾಘವೇಂದ್ರ ಎಸ್. ಭಟ್ ಕರ್ಣಾಟಕ ಬ್ಯಾಂಕ್ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕಗೊಂಡಿದ್ದಾರೆ. ಬ್ಯಾಂಕ್ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿಗಳ ರಾಜೀನಾಮೆ ಭಾರೀ ಚರ್ಚೆಗೆ ಕಾರಣವಾಗಿತ್ತು.
ಬ್ಯಾಂಕಿನ ಮಾಹಿತಿ ಪ್ರಕಾರ ರಾಘವೇಂದ್ರ ಎಸ್. ಭಟ್ ಜುಲೈ 16 ರಿಂದ ಮೂರು ತಿಂಗಳ ಕಾಲ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ಅಧಿಕಾರ ವಹಿಸಿಕೊಂಡ ಬಳಿಕ ನಡೆಯುವ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ಒಪ್ಪಿಗೆ ಸಿಕ್ಕ ಬಳಿಕ ನೇಮಕಾತಿ ಅವಧಿಯನ್ನು ಮುಂದುವರೆಸಲಾಗುತ್ತದೆ. ಕರ್ಣಾಟಕ ಬ್ಯಾಂಕ್‌ನಲ್ಲಿ ರಾಘವೇಂದ್ರ ಎಸ್. ಭಟ್ ಸಿಒಒ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಸುಮಾರು 4 ದಶಕಗಳ ಕಾಲ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ರಾಘವೇಂದ್ರ ಎಸ್. ಭಟ್ ನೇಮಕದ ಕುರಿತು ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ನಾವು ರಾಘವೇಂದ್ರ ಎಸ್. ಭಟ್ ಅವರನ್ನು ಸ್ವಾಗತಿಸುತ್ತೇವೆ. ಅವರ ಅನುಭವ, ಶ್ರಮ ನಮ್ಮ ಬ್ಯಾಂಕ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ನಮ್ಮ ಷೇರುದಾರರು, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ರಾಘವೇಂದ್ರ ಎಸ್. ಭಟ್ ಜೊತೆ ನಾವು ಕಾರ್ಯ ನಿರ್ವಹಣೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಜುಲೈ 15ರಿಂದ ಅನ್ವಯವಾಗುವಂತೆ ಶ್ರೀಕೃಷ್ಣನ್ ಹರಿರ ಶರ್ಮಾ ರಾಜೀನಾಮೆ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಹೇಳಿತ್ತು. ಮುಂಬೈಗೆ ಮರಳುವುದು ಸೇರಿದಂತೆ ವೈಯಕ್ತಿಕ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ ಎಂದು ಬ್ಯಾಂಕ್ ತಿಳಿಸಿತ್ತು.
ಅಲ್ಲದೇ ಬ್ಯಾಂಕ್ ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರರಾವ್ ಕೂಡಾ ಮಂಗಳೂರಿಗೆ ಸ್ಥಳಾಂತರಗೊಳ್ಳಲು ಅಸಾಧ್ಯ ಮತ್ತು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆಯನ್ನು ಅಂಗೀಕಾರ ಮಾಡಲಾಗಿದ್ದು, ಜುಲೈ 31ರಿಂದ ಜಾರಿಗೆ ಬರಲಿದೆ.
ಬ್ಯಾಂಕ್‌ನ ಇಬ್ಬರು ಉನ್ನತ ಅಧಿಕಾರಿಗಳ ರಾಜೀನಾಮೆ 101 ವರ್ಷಗಳನ್ನು ಪೂರೈಸಿರುವ ಕರ್ಣಾಟಕ ಬ್ಯಾಂಕ್ ಸುದ್ದಿಯಾಗುವಂತೆ ಮಾಡಿತ್ತು. ಈ ರಾಜೀನಾಮೆಗಳ ಬಳಿಕ ಬ್ಯಾಂಕಿನ ಷೇರುಗಳು ಕುಸಿತಕಂಡಿದ್ದವು.
ಈ ರಾಜೀನಾಮೆ ಗ್ರಾಹಕರು, ಠೇವಣಿದಾರರಲ್ಲಿ ಆತಂಕ ಉಂಟು ಮಾಡಿತ್ತು. ಆಗ ಕರ್ಣಾಟಕ ಬ್ಯಾಂಕ್ ಸ್ಥಿರ ಮತ್ತು ಭದ್ರವಾಗಿದೆ. ಬ್ಯಾಂಕಿನ ತಳಹದಿ ಭದ್ರವಾಗಿದ್ದು, ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು.
ರಾಜೀನಾಮೆಗಳ ಬಳಿಕ ಎಂಡಿ, ಸಿಇಒ ಸ್ಥಾನಕ್ ಹೊಸಬರನ್ನು ನೇಮಕ ಮಾಡಲು ಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ಹೊಸ ನೇಮಕಾತಿ ತನಕ ಮಧ್ಯಂತರ ಎಂಡಿ, ಸಿಇಒ ನೇಮಕಾತಿಗೆ ಅನುಮತಿ ಕೋರಿ ಆರ್‌ಬಿಐಗೆ ಮನವಿ ಮಾಡಲಾಗಿತ್ತು.
Jahid Khan and other than