Home ತಾಜಾ ಸುದ್ದಿ ಸಾಮಾಜಿಕ ನ್ಯಾಯ ಒದಗಿಸಿದ ಚರಿತ್ರೆ ನಮ್ಮ ನಾಡಿಗಿದೆ

ಸಾಮಾಜಿಕ ನ್ಯಾಯ ಒದಗಿಸಿದ ಚರಿತ್ರೆ ನಮ್ಮ ನಾಡಿಗಿದೆ

0

ಬೆಂಗಳೂರು: ನ್ಯಾಯವನ್ನು ಕ್ರಾಂತಿಕಾರಿಯಾಗಿ ಜಾರಿ ಮಾಡಿದ ಇತಿಹಾಸವನ್ನು ಕನ್ನಡ ನೆಲ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ದೇವರಾಜು ಅರಸು ಅವರ 108ನೇ ಜನ್ಮ ದಿನಾಚರಣೆ ಹಾಗೂ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಸಮಾಜವಾದಿ ಚಳವಳಿ ಮತ್ತು ಗೇಣಿ ಹೋರಾಟಗಾರರಾದ ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜ ಅರಸು ಪ್ರಶಸ್ತಿ ಲಭಿಸಿರುವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ. ನಾನು ಮುಖ್ಯಮಂತ್ರಿ ಆಗಿರುವ ಅವಧಿಯಲ್ಲೇ ಕಾಗೋಡು ತಿಮ್ಮಪ್ಪ ಅವರಿಗೆ ಅರಸು ಪ್ರಶಸ್ತಿ ಲಭಿಸಿರುವುದು ಅತ್ಯಂತ ಖುಷಿಯಾಗಿದೆ ಎಂದರು.
ಬಹಳಷ್ಟು ಯುವ ಜನರು ಕಾಗೋಡು ತಿಮ್ಮಪ್ಪನವರಿಂದ ಪ್ರಭಾವಿತರಾಗಿ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇವರಾಜ ಅರಸು ಪ್ರಶಸ್ತಿಗೆ ಕಾಗೋಡು ತಿಮ್ಮಪ್ಪನವರು ಅತ್ಯಂತ ಅರ್ಹರು ಎನ್ನುವುದು ನನ್ನ ಭಾವನೆ. ದೇವರಾಜ ಅರಸು ಅವರ ಕಾರ್ಯಕ್ರಮಗಳ ಅನುಕೂಲ ಪಡೆದ ಫಲಾನುಭವಿಗಳು ಮತ್ತು ಅವರ ಮಕ್ಕಳು ಶಾಶ್ವತವಾಗಿ ಸಾಮಾಜಿಕ ನ್ಯಾಯದ ಪರವಾಗಿ ಇರಬೇಕು. ಸಾಮಾಜಿಕ ನ್ಯಾಯವನ್ನು ಕ್ರಾಂತಿಕಾರಿಯಾಗಿ ಜಾರಿ ಮಾಡಿದ ಇತಿಹಾಸವನ್ನು ಕನ್ನಡ ನೆಲ ಹೊಂದಿದೆ. ಬಸವಣ್ಣನವರಿಂದ ಹಿಡಿದು ಕೃಷ್ಣರಾಜ ಒಡೆಯರು ಮತ್ತು ದೇವರಾಜ ಅರಸು ಅವರ ವರೆಗೆ ಸಾಮಾಜಿಕ ನ್ಯಾಯ ಒದಗಿಸಿದ ಚರಿತ್ರೆ ನಮ್ಮ ನಾಡಿಗಿದೆ.‌ ಅಧಿಕಾರ ಮತ್ತು ಸಂಪತ್ತು ಕೆಲವರ ಕೈಯಲ್ಲಿ ಮಾತ್ರ ಇರಬಾರದು ಎನ್ನುವ ಆಶಯ ಬಸವಣ್ಣನವರ ಕಾಲದಿಂದಲೂ ಈ ನೆಲದಲ್ಲಿ ನೆಲೆಯೂರಿದೆ.
ದೇವರಾಜ ಅರಸರು ಜಾರಿಗೆ ತಂದಿದ್ದು, ಕಾಗೋಡು ತಿಮ್ಮಪ್ಪನವರು ಹೋರಾಟ ಮಾಡಿದ್ದು ಇಬ್ಬರ ಉದ್ದೇಶವೂ ‘ಉಳುವವನೇ ಭೂಮಿ ಒಡೆಯ’ ಆಗಬೇಕು ಎನ್ನುವುದಾಗಿತ್ತು. ಆದರೆ, ಈಗ ಬಿಜೆಪಿ ಬಂದ ಮೇಲೆ “ಉಳ್ಳವನೇ ಭೂಮಿ ಒಡೆಯ” ಎನ್ನುವಂತಾಗಿದೆ. ಕಾಗೋಡು ಹೋರಾಟ ಮತ್ತು ಗೇಣಿ ಹೋರಾಟದ ಫಲಾನುಭವಿಗಳು ಮತ್ತು ಈಗಿನ ಪೀಳಿಗೆಯ ಯುವಕ, ಯುವತಿಯರು ಇದನ್ನೆಲ್ಲಾ ಅರ್ಥ ಮಾಡಿಕೊಂಡು ಸಾಮಾಜಿಕ ನ್ಯಾಯದ ಪರವಾಗಿ ಇರಬೇಕು.
ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶ ಇದ್ದರೂ ಅದು ಜಾರಿ ಆಗಿರಲಿಲ್ಲ. ರಾಜ್ಯದಲ್ಲಿ ದೇವರಾಜ ಅರಸರು‌ ಮುಖ್ಯಮಂತ್ರಿಯಾಗಿ ಹಾವನೂರು ವರದಿ ತರಿಸಿಕೊಂಡು ಅದನ್ನು ಜಾರಿ ಮಾಡುವ ಎದೆಗಾರಿಕೆ ತೋರಿಸಿದರು. ಹೀಗೆ ಮಾಡುವಾಗ ಎಲ್ಲಾ ಜಾತಿ-ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡರು. ಆ ಮೂಲಕ ಸಂವಿಧಾನ ಬದ್ಧವಾದ ಮೀಸಲಾತಿಯನ್ನು ಕನ್ನಡ ನೆಲದಲ್ಲಿ ಜಾರಿ ಮಾಡಿದರು ಎಂದರು.

Exit mobile version