Home News ಶಿಕ್ಷಕರ ದಿನದಂದೇ ನಿವೃತ್ತ ಶಿಕ್ಷಕ, ಮಾಜಿ ಸಚಿವ ಪ್ರಭಾಕರ್ ರಾಣೆ ನಿಧನ

ಶಿಕ್ಷಕರ ದಿನದಂದೇ ನಿವೃತ್ತ ಶಿಕ್ಷಕ, ಮಾಜಿ ಸಚಿವ ಪ್ರಭಾಕರ್ ರಾಣೆ ನಿಧನ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ- ಜೊಯಿಡಾ ಭಾಗದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ವಿದ್ಯಾದಾನ ಮಾಡಿದ್ದ ಮಾಜಿ ಸಚಿವ ಪ್ರಭಾಕರ್ ರಾಣೆ (81) ಅವರು ಶಿಕ್ಷಕರ ದಿನವಾದ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.
ಕಾರವಾರದ ಸಿದ್ದರ ಮೂಲದ ಅವರಿಗೆ ತಿಂಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಅವರಿಗೆ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಕೊಂಚ ಚೇತರಿಸಿಕೊಂಡು ಸದ್ಯ ಮನೆಯಲ್ಲಿ ಹಾಸಿಗೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇಂದು ಮಧ್ಯಾಹ್ನ 1.30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಕಾರವಾರ- ಜೊಯಿಡಾ ಕ್ಷೇತ್ರದಿಂದ ಮೂರು ಬಾರಿ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ರಾಣೆ, ವಿರಪ್ಪ ಮೊಯ್ಲಿ ಸರ್ಕಾರದಲ್ಲಿ 10 ತಿಂಗಳು ಗ್ರಂಥಾಲಯ ಮತ್ತು ವಯಸ್ಕರ ಶಿಕ್ಷಣ ಸಚಿವರಾಗಿದ್ದರು.
ಅಲ್ಲದೆ ಇದಕ್ಕೂ ಮೊದಲು ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇರ್ಪಡೆಗೊಂಡು ಸೇವೆ ಸಲ್ಲಿಸಿದ್ದ ಅವರು, ಬಳಿಕ ಅದೇ ಸಂಸ್ಥೆಗೆ ಅಧ್ಯಕ್ಷರಾಗಿದ್ದರು. ನಂತರದಲ್ಲಿ ಬಾಪೂಜಿ ಗ್ರಾಮೀಣ ವಿಕಾಸ ಸಂಸ್ಥೆ ಅಡಿ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜು ಆರಂಭಿಸಿ, ವಿವಿಧೆಡೆ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದರು.

Exit mobile version