Home ನಮ್ಮ ಜಿಲ್ಲೆ ಉತ್ತರ ಕನ್ನಡ ಉತ್ತರ ಕನ್ನಡ: ಕಬ್ಬು ಬೆಳೆಗಾರರ ಬೆಂಬಲಕ್ಕೆ ಬಂದ ಜಿಲ್ಲಾಡಳಿತ

ಉತ್ತರ ಕನ್ನಡ: ಕಬ್ಬು ಬೆಳೆಗಾರರ ಬೆಂಬಲಕ್ಕೆ ಬಂದ ಜಿಲ್ಲಾಡಳಿತ

0

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕಬ್ಬು ಬೆಳೆಗಾರರ ಬೆಂಬಲಕ್ಕೆ ಜಿಲ್ಲಾಡಳಿತ ಆಗಮಿಸಿದೆ. ರೈತರ ಪ್ರಮುಖ ಸಮಸ್ಯೆಗಳಿಗೆ ಪರಿಹಾರವನ್ನು ಜಿಲ್ಲಾಡಳಿತ ಒದಗಿಸಿದೆ. ಜಿಲ್ಲೆಯ ಕಬ್ಬು ಬೆಳೆಗಾರರ ಪ್ರಮುಖ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರಿಗೆ ಎಲ್ಲಾ ರೀತಿಯ ಬೆಂಬಲ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಭರವಸೆ ನೀಡಿದರು.

ಹಳಿಯಾಳ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ 2025-26ನೇ ಸಾಲಿನ ಕಬ್ಬು ಅರೆಯುವ ಹಂಗಾಮನ್ನು ಪ್ರಾರಂಭ ಮಾಡುವ ಬಗ್ಗೆ ಹಾಗೂ ಕಬ್ಬಿಗೆ ಸಂಬಂಧಿಸಿದ ಮತ್ತಿತರ ವಿಷಯಗಳ ಬಗ್ಗೆ ನಡೆದ ಸಭೆಯ ಅಧ್ಯಕತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಕಬ್ಬು ಬೆಳೆಗಾರರ ಬಹುಕಾಲದ ಬೇಡಿಕೆಯಾದ ಕಬ್ಬು ಕಾರ್ಖಾನೆಯ ಮುಂಭಾಗದಲ್ಲಿ ಕಬ್ಬು ತೂಕ ಅಳತೆ ಮಾಡುವ ಯಂತ್ರ ಅಳವಡಿಕೆ ಬೇಡಿಕೆ ಕುರಿತಂತೆ ಕಾರ್ಖಾನೆಯ ಅಧಿಕಾರಿಗಳಿಗೆ ಇಂದೇ ಈ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸುವಂತೆ ಸೂಚಿಸಿದರು. ಈ ಬಾರಿಯ ಕಬ್ಬು ನುರಿಯುವ ಹಂಗಾಮು ಪ್ರಾರಂಭವಾಗುವ ಒಳಗೆ ಕಾರ್ಖಾನೆ ಮುಂಭಾಗದಲ್ಲೇ ತೂಕ ಮಾಡುವ ಯಂತ್ರವನ್ನು ಅಳವಡಿಸುವುದಾಗಿ ಕಾರ್ಖಾನೆ ಅಧಿಕಾರಿಗಳು ಸಭೆಯಲ್ಲಿ ಸ್ಪಷ್ಟ ಪಡಿಸಿದರು.

ಕಬ್ಬು ಕಟಾವಣೆ ಮಾಡಲಾದ 2023-24ನೇ ಸಾಲಿನಲ್ಲಿ ರೈತರಿಂದ ಹೆಚ್ಚುವರಿ ಆಕರಣೆ ಮಾಡಲಾದ ಹೆಚ್‌ಅಂಡ್‌ಟಿ ದರ ರೂ. 256 ಅನ್ನು ರೈತರಿಗೆ ಮರುಪಾವತಿ ಮಾಡುವಂತೆ ಕಬ್ಬು ಆಯುಕ್ತರು ಆದೇಶ ಮಾಡಿದ್ದರು ಕೂಡಾ ಇದುವರೆಗೂ ಕಾರ್ಖಾನೆ ಅವರು ಪಾವತಿ ಮಾಡದೇ ಇರುವ ಬಗ್ಗೆ ರೈತ ಮುಖಂಡರು ದೂರಿದರು.

ಈ ದೂರಿನ ಕುರಿತಂತೆ, 2023-24 ರಲ್ಲಿನ ಹೆಚ್ಚುವರಿ ಮೊತ್ತ 256 ರೂ.ಗಳಂತೆ ಒಟ್ಟು 26 ಕೋಟಿ ಮೊತ್ತವನ್ನು ಕಾರ್ಖಾನೆಯವರು ರೈತರಿಗೆ ನೀಡುವಂತೆ ಕಬ್ಬು ಆಯುಕ್ತರಿಂದ ನೀಡಿದ್ದ ಆದೇಶವನ್ನು ಪಾಲನೆ ಮಾಡಿಲ್ಲವೆಂದು ಫ್ಯಾಕ್ಟರಿಯವರಿಗೆ ಕಬ್ಬು ಆಯುಕ್ತರು ನೋಟಿಸ್ ನೀಡಿದ್ದು, ಕಾರ್ಖಾನೆಯವರು ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಅಲ್ಲಿ ಕೂಡ ಎರಡು ವಾರಗಳ ತಡೆಯಜ್ಞೆ ನೀಡಲಾಗಿದೆ. ಅದನ್ನು ಧಾರವಾಡದ ನ್ಯಾಯಾಲಯಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಹಾಗೂ ಕಾರ್ಖಾನೆಯವರು ರೈತರಿಗೆ ಹೆಚ್ಚುವರಿ ಮೊತ್ತವನ್ನು ನೀಡಲು ಆದೇಶ ಹೊರಡಿಸುವಂತೆ ಕಬ್ಬು ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದರು.

ಕಳೆದ ವರ್ಷದಂತೆ ಈ ವರ್ಷ ಕೂಡ ಕಬ್ಬು ಕಟಾವನೆ ಕುರಿತು ಆದ್ಯತಾ ಪಟ್ಟಿ ಪ್ರಕಟ ಮಾಡಬೇಕು ಅದನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಕಾರ್ಖಾನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಇದನ್ನು ಉಲ್ಲಂಘನೆ ಮಾಡುವುದು ಕಂಡು ಬಂದಲ್ಲಿ ರೈತರು, ಪೊಲೀಸರಿಗೆ ಅಥವಾ ತಹಶೀಲ್ದಾರರಿಗೆ ಮಾಹಿತಿ ನೀಡಬಹುದು ಹಾಗೂ ಅಂತಹವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಪ್ರತಿ ವರ್ಷ ಮಳೆಗಾಲ ಸಮಯದಲ್ಲಿ ಹೆಚ್ಚಾಗಿ ರಸ್ತೆಗಳು ಹಾಳಗುವುದು ಸಾಮಾನ್ಯವಾಗಿದ್ದು, ಕಳೆದ ವರ್ಷ ಮಾಡಲಾದ ರಸ್ತೆಗಳು ಹಾಳಾಗಿರುವ ನಿರ್ದಿಷ್ಟ ರಸ್ತೆಗಳನ್ನು ಗುರಿತಿಸಲಾಗಿದ್ದು, ಅದನ್ನು ಗುತ್ತಿಗೆದಾರರೆ ನಿರ್ವಹಣೆ ಮಾಡಬೇಕು. ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ನೀಡುವುದಿಲ್ಲ ಒಂದು ವೇಳೆ ನಿರ್ವಹಣೆ ಮಾಡದೇ ಇದ್ದಲ್ಲಿ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಂಜಿನೀಯರ್ ಇಲಾಖೆಯವರಿಗೆ ಸೂಚನೆ ನೀಡಿದ ಅವರು, ರೈತರಿಗೆ ಅನುಕೂಲವಾಗುವಂತೆ ಕಾರ್ಖಾನೆಗಳು ಆರಂಭವಾಗುವ ಮುಂಚಿತವಾಗಿ ಈ ಭಾಗದ ರಸ್ತೆಗಳನ್ನು ಸರಿಪಡಿಸಲು ತಹಶೀಲ್ದಾರರಿಗೆ ಹಾಗೂ ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜವಾಬ್ದಾರಿ ನೀಡಲಾಗುವುದು ಎಂದರು.

ಜಿಲ್ಲೆಯ ರೈತರ ಹಿತರಕ್ಷಣೆ ಗೆ ಪೂರಕವಾಗಿ ಜಿಲ್ಲಾಡಳಿತ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ರೈತರು ಕೂಡಾ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಮುಂತಾದವರು ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version