6 ಗೇಟ್ ಮೂಲಕ 30 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ!
ಕಾರವಾರ: ಭಾರಿ ಮಳೆಯಿಂದಾಗಿ ಕದ್ರಾ ಜಲಾಶಯಕ್ಕೆ 30 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರಿನ ಒಳಹರಿವು ಇರುವ ಹಿನ್ನೆಲೆಯಲ್ಲಿ ಜಲಾಶಯದಿಂದ 6 ಗೇಟ್ ಮೂಲಕ 30 ಸಾವಿರ ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಹರಿಬಿಡಲಾಗಿದೆ.
ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಅದರಲ್ಲಿಯೂ ಜೋಯಿಡಾ, ದಾಂಡೇಲಿ ಸೇರಿದಂತೆ ಘಟ್ಟದ ಮೇಲ್ಬಾಗದ ಕಾಳಿ ನದಿ ವ್ಯಾಪ್ತಿಯ ಪ್ರದೇಶದಲ್ಲಿ ಎಡಬಿಡದೆ ಸುರಿದ ಮಲೆಯಿಂದಾಗಿ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.
ಗರಿಷ್ಠ 34.50 ಮೀಟರ್ ಇರುವ ಕದ್ರಾ ಜಲಾಶಯದಲ್ಲಿ ಇಂದು 31.37 ಮೀಟರ್ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ 31,900 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಅಲ್ಲದೆ ವಿದ್ಯುತ್ ಉತ್ಪಾದನೆಯೂ ಸೇರಿ ಒಟ್ಟು 51 ಸಾವಿರ ಕೂಸೆಕ್ ನೀರನ್ನು ಹೊರಬಿಡಲಾಗಿದೆ. ಇನ್ನು ಜಲಾಶಯದಿಂದ ನೀರು ಹೊರಬಿಡುತ್ತಿದ್ದಂತೆ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ನದಿ ತೀರದ ಪ್ರದೇಶದಲ್ಲಿ ನೀರು ಏರಿಕೆಯಾಗುತ್ತಿರುವ ಕಾರಣ ಮತ್ತೊಮ್ಮೆ ಪ್ರವಾಹ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಈಗಾಗಲೇ ನದಿ ತೀರದ ನಿವಾಸಿಗಳಿಗೆ ಸ್ಥಳಾಂತರಕ್ಕೆ ಸೂಚಿಸಿದ್ದು, ಕೆಲಕಡೆ ಮನೆಗಳಲ್ಲಿ ಇದ್ದವರನ್ನು ಸ್ಥಳಾಂತರ ಕೂಡ ಮಾಡಲಾಗಿದೆ.
