ಉಡುಪಿ: ನಾವು ಮದ್ಯ ಕುಡಿದರಷ್ಟೇ ಸರಕಾರ ನಡೆಯುತ್ತದೆ. ಆದರೆ, ಮದ್ಯದ ದರ ಹೆಚ್ಚಿಸಿದ್ದೀರಿ. ಇದ್ಯಾವ ನ್ಯಾಯ ಸ್ವಾಮಿ? ಇದು ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಪ್ರಶ್ನೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಮಂಗಳವಾರ ಮದ್ಯದ ಬೆಲೆ ಏರಿಕೆ ವಿರುದ್ಧ ನಡೆದ ವಿನೂತನ ಪ್ರತಿಭಟನೆಯಲ್ಲಿ ವ್ಯಕ್ತವಾದ ಅಭಿಪ್ರಾಯವಿದು. ಒಂದೋ ಮದ್ಯ ನಿಷೇಧ ಮಾಡಿ. ಅದಾಗದಿದ್ದರೆ ಬೆಳಿಗ್ಗೆ ಮತ್ತು ಸಂಜೆ ಉಚಿತವಾಗಿ ನೈಂಟಿ ಕೊಡಿ ಎಂದು ಮದ್ಯ ಪ್ರಿಯರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಿದರು.
ಸರ್ಕಾರ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಅವುಗಳನ್ನು ಜಾರಿಗೊಳಿಸುತ್ತಿದೆ. ಇದೇ ವೇಳೆ ಬಜೆಟ್‌ನಲ್ಲಿ ಮದ್ಯದ ದರವನ್ನೂ ಏರಿಕೆ ಮಾಡಿದೆ. ಇದು ಸರಿಯಲ್ಲ ಎಂದರು. ಇಲ್ಲಿನ ಚಿತ್ತರಂಜನ್ ಸರ್ಕಲ್ ಸಮೀಪ ವಿಶಿಷ್ಟವಾಗಿ ಪ್ರತಿಭಟನೆ ನಡೆಸಲಾಯಿತು. ನಾಡಿನ ಬೊಕ್ಕಸಕ್ಕೆ ಕಾಣಿಕೆ ನೀಡುವ ಕುಡುಕರು ದೇವರ ಸಮಾನ ಎಂದು ಮದ್ಯ ಪ್ರಿಯರಿಗೆ (ಕುಡುಕರಿಗೆ) ತಮಟೆ ವಾದ್ಯದ ಹಿನ್ನೆಲೆಯಲ್ಲಿ ಮಲ್ಲಿಗೆ ಹಾರ ಹಾಕಿ, ಆರತಿ ಬೆಳಗಿ ಗೌರವಿಸಲಾಯಿತು. ಅವರ ಮುಂದೆ ದೊಡ್ಡ ಮದ್ಯದ ಬಾಟಲಿಯೊಂದನ್ನು ಇರಿಸಲಾಗಿತ್ತು.
ಸರ್ಕಾರ ಉಚಿತ ಭಾಗ್ಯಗಳನ್ನು ಜಾರಿಗೊಳಿಸಿದೆ. ಮದ್ಯದ ಬೆಲೆ ಹೆಚ್ಚಳ ಮಾಡಿದೆ. ಮದ್ಯ ವ್ಯಸನಿಗಳಿಂದಲೇ ಸರ್ಕಾರದ ಬೊಕ್ಕಸ ತುಂಬುತ್ತಿದೆ. ಮದ್ಯದ ಬೆಲೆ ಏರಿಕೆಯಿಂದ ಕೂಲಿ ಕಾರ್ಮಿಕರು ಮದ್ಯ ಸೇವಿಸಲು ಅಸಹಾಯಕ ಪರಿಸ್ಥಿತಿ ಎದುರಿಸುವಂತಾಗಿದೆ. ಸರ್ಕಾರ ಉಚಿತ ಭಾಗ್ಯಗಳನ್ನು ನೀಡಿದಂತೆ ಕಾರ್ಮಿಕ ವರ್ಗದವರಿಗೆ ಉಚಿತ ಮದ್ಯ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಮದ್ಯಪ್ರಿಯರು ಒತ್ತಾಯಿಸಿದರು. ವಿನೂತನ ಪ್ರತಿಭಟನೆ ಕಂಡು ಸಾರ್ವಜನಿಕರು ಮುಸಿ ಮುಸಿ ನಕ್ಕರು.
