ಕರ್ನಾಟಕ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕುರಿತಾದ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿವೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ನಾಯಕತ್ವಕ್ಕೆ ಸಂಬಂಧಿಸಿದಂತೆ ಪದೇ ಪದೇ ಉಂಟಾಗುತ್ತಿರುವ ಗೊಂದಲಗಳಿಗೆ ಹೈಕಮಾಂಡ್ ಕಡಿವಾಣ ಹಾಕಬೇಕೆಂದು ಸತೀಶ್ ಜಾರಕಿಹೊಳಿ ಮತ್ತು ಜಿ. ಪರಮೇಶ್ವರ್ ಅವರಂತಹ ಹಿರಿಯ ನಾಯಕರು ಒತ್ತಾಯಿಸಿದ್ದಾರೆ.
ಮೇಲ್ನೋಟಕ್ಕೆ ಇದು ಪಕ್ಷದಲ್ಲಿನ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನವೆಂದು ಕಂಡರೂ, ಇದರ ಹಿಂದೆ ಆಳವಾದ ರಾಜಕೀಯ ಲೆಕ್ಕಾಚಾರಗಳು ಅಡಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಕೆಲವು ತಿಂಗಳಿಂದ ಮುಖ್ಯಮಂತ್ರಿ ಸ್ಥಾನದ ಬಗ್ಗೆ ನಡೆಯುತ್ತಿರುವ ಪರೋಕ್ಷ ಚರ್ಚೆಗಳು, ಹೇಳಿಕೆಗಳು ಕಾಂಗ್ರೆಸ್ ವಲಯದಲ್ಲಿ ಒಂದು ರೀತಿಯ ಗೊಂದಲವನ್ನು ಸೃಷ್ಟಿಸಿವೆ.
ಡಿ.ಕೆ. ಶಿವಕುಮಾರ್ ನೇರವಾಗಿ ಯಾವುದೇ ಹೇಳಿಕೆ ನೀಡದಿದ್ದರೂ, ಆಗಾಗ್ಗೆ ದೆಹಲಿ ಭೇಟಿಗಳು ಮತ್ತು ಬೆಂಬಲಿಗರಿಂದ ಹೊರಬೀಳುವ ಮಾತುಗಳು ನಾಯಕತ್ವ ಬದಲಾವಣೆಯ ನಿರೀಕ್ಷೆಯನ್ನು ಹುಟ್ಟುಹಾಕಿವೆ. ಈ ಬೆಳವಣಣಿಗೆಗಳು ಆಡಳಿತದ ಮೇಲೂ ಪರಿಣಾಮ ಬೀರುತ್ತಿದ್ದು, ಅಧಿಕಾರಿ ವಲಯದಲ್ಲಿಯೂ ಅನಿಶ್ಚಿತತೆಯನ್ನು ಸೃಷ್ಟಿಸಿವೆ ಎಂದು ಸಿದ್ದರಾಮಯ್ಯ ಬೆಂಬಲಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಂಘಟನೆಗೂ ಇದು ಹಿನ್ನಡೆಯಾಗಬಹುದು ಎಂಬ ಆತಂಕವೂ ಅವರನ್ನು ಕಾಡುತ್ತಿದೆ.
ಹೈಕಮಾಂಡ್ ಮೇಲೆ ಒತ್ತಡದ ತಂತ್ರ: ಸತೀಶ್ ಜಾರಕಿಹೊಳಿ “ನಾಯಕತ್ವ ಬದಲಾವಣೆಯ ಕುರಿತು ಪದೇ ಪದೇ ಹೇಳಿಕೆಗಳು ಹೊರಬರುತ್ತಿದ್ದು, ಇದರಿಂದ ಗೊಂದಲ ಸೃಷ್ಟಿಯಾಗಿದೆ. ಹೈಕಮಾಂಡ್ ಈ ಬಗ್ಗೆ ಸ್ಪಷ್ಟವಾದ ನಿರ್ಧಾರ ಕೈಗೊಳ್ಳುವ ಮೂಲಕ ಇದಕ್ಕೆ ಪೂರ್ಣ ವಿರಾಮ ಹಾಕಬೇಕು,” ಎಂದು ಆಗ್ರಹಿಸಿದ್ದಾರೆ.
ಈ ಮಾತನ್ನು ಬೆಂಬಲಿಸಿದ ಜಿ. ಪರಮೇಶ್ವರ್ “ಸತೀಶ್ ಜಾರಕಿಹೊಳಿ ಹೇಳಿದ್ದು ಸರಿ. ಸಿಎಂ ಬದಲಾವಣೆಯ ಬಗ್ಗೆ ನಿತ್ಯ ಹೇಳಿಕೆಗಳು ಬರುತ್ತಿರುವುದು ಸರಿಯಲ್ಲ. ಈ ಎಲ್ಲಾ ಬೆಳವಣಿಗೆಗಳು ಹೈಕಮಾಂಡ್ ಗಮನಕ್ಕೆ ಬಂದಿವೆ. ಯಾವ ಸಂದರ್ಭದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದು ಅವರಿಗೆ ಗೊತ್ತಿದೆ,” ಎಂದು ಹೇಳಿದ್ದಾರೆ. ಈ ಹೇಳಿಕೆಗಳ ಮೂಲಕ ಸಿದ್ದರಾಮಯ್ಯ ಬೆಂಬಲಿಗರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಾವಧಿಯನ್ನು ಭದ್ರಪಡಿಸಿಕೊಳ್ಳುವ ತಂತ್ರಗಾರಿಕೆಯನ್ನು ರೂಪಿಸಿದ್ದಾರೆ.
ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರ?: ರಾಜ್ಯದಲ್ಲಿ ಎರಡುವರೆ ವರ್ಷಗಳ ನಂತರ ಸಿಎಂ ಸ್ಥಾನ ಬದಲಾವಣೆ ಆಗಬಹುದು ಎಂಬ ಊಹಾಪೋಹಗಳು ಸಿದ್ದರಾಮಯ್ಯ ಬೆಂಬಲಿಗರನ್ನು ಕೆರಳಿಸಿವೆ. ಒಂದು ಕಡೆ, ಡಿ.ಕೆ. ಶಿವಕುಮಾರ್ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟು ತೆರೆಮರೆಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮತ್ತೊಂದೆಡೆ ಸಿದ್ದರಾಮಯ್ಯ ಬೆಂಬಲಿಗರು, ಸಿದ್ದರಾಮಯ್ಯ ಅವರೇ ಮುಂದಿನ ಎರಡುವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮತ್ತು ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹೈಕಮಾಂಡ್ ನಾಯಕರು ಈ ಬಗ್ಗೆ ಯಾವುದೇ ಸ್ಪಷ್ಟ ಸೂಚನೆ ನೀಡಿಲ್ಲ.
ಈ ಮೌನವು ಸಿದ್ದರಾಮಯ್ಯ ಬೆಂಬಲಿಗರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ, ಸತೀಶ್ ಜಾರಕಿಹೊಳಿ ಮತ್ತು ಜಿ. ಪರಮೇಶ್ವರ್ ಅವರಂತಹ ನಾಯಕರ ಮೂಲಕ, ಸಿಎಂ ಬದಲಾವಣೆ ಚರ್ಚೆಗೆ ಅಂತ್ಯ ಹಾಡಲು ಹೈಕಮಾಂಡ್‌ನಿಂದ ಸ್ಪಷ್ಟ ಆದೇಶ ಬರುವಂತೆ ಮಾಡುವ ಮತ್ತು ಅದೇ ಸಮಯದಲ್ಲಿ, ಸಿದ್ದರಾಮಯ್ಯ ಸ್ಥಾನವನ್ನು ಭದ್ರಪಡಿಸಿಕೊಳ್ಳುವ “ಒಂದು ಕಲ್ಲಿಗೆ ಎರಡು ಹಕ್ಕಿ” ಹೊಡೆಯುವ ತಂತ್ರವನ್ನು ಅನುಸರಿಸಲಾಗುತ್ತಿದೆ.
ಈ ಮೂಲಕ ಪಕ್ಷದಲ್ಲಿನ ಭಿನ್ನಮತವನ್ನು ನಿಯಂತ್ರಿಸಿ, ಸ್ಥಿರ ಸರ್ಕಾರವನ್ನು ನೀಡುವ ಸಂದೇಶವನ್ನು ರವಾನಿಸುವ ಪ್ರಯತ್ನವೂ ಇದರ ಹಿಂದಿದೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಈ ವಿಷಯದಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.