ಬೆಂಗಳೂರು: ಟೆಲಿಕಾಂ ನೆಟವರ್ಕ್ ಎಲ್ಲೆಡೆ ತಡೆರಹಿತವಾಗಿ ಲಭ್ಯತೆಗಾಗಿ ಧಾರವಾಡ ಜಿಲ್ಲೆಯ 53 ಸ್ಥಳಗಳಲ್ಲಿ ಹೊಸ ಟವರ್ ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು “ಧಾರವಾಡ ಲೋಕಸಭಾ ಕ್ಷೇತ್ರವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಟೆಲಿಕಾಂ ನೆಟವರ್ಕ್ ಎಲ್ಲೆಡೆ ತಡೆರಹಿತವಾಗಿ ಲಭ್ಯತೆಯಾಗಲು ಹೊಸ ಟವರ್‌ಗಳನ್ನು ಸ್ಥಾಪಿಸಲು, ಈಗಿರುವ ಟವರ್‌ಗಳನ್ನು ಉನ್ನತೀಕರಿಸಲು ಇಂದು ಸಂಸತ್ತಿನ ನನ್ನ ಕಾರ್ಯಾಲಯದಲ್ಲಿ ಮಾನ್ಯ ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಅವರೊಂದಿಗೆ ಸಭೆನಡೆಸಿ, ಸಂಬಂಧಪಟ್ಟ ಸ್ಥಳಗಳಲ್ಲಿ ಮೊಬೈಲ್ ಟವರ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದೆನು. ಜಿಲ್ಲೆಯ 53 ಸ್ಥಳಗಳಲ್ಲಿ ಟವರ್ ಅವಶ್ಯವಿರುವ ಕುರಿತು ನನ್ನ ಗಮನಕ್ಕೆ ಬಂದಿದ್ದು, ಎಲ್ಲವನ್ನೂ ಕೂಲಂಕಷವಾಗಿ ಸಚಿವರೊಂದಿಗೆ ಚರ್ಚಿಸಲಾಯಿತು. ನಮ್ಮ ಪ್ರಸ್ತಾವನೆಗೆ ಸ್ಪಂದಿಸಿದ ಸಚಿವರು, ಕೂಡಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು” ಎಂದಿದ್ದಾರೆ.
