ರಬಕವಿ-ಬನಹಟ್ಟಿ: ಕಳೆದ ಮೂರು ತಿಂಗಳಿಂದ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ದಾಸರ ಓಣಿ ಹಾಗೂ ಸಿಕ್ಕಲಗಾರ ಓಣಿಗಳಲ್ಲಿ 5 ವರ್ಷದ ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ನಂತರ ಗೊಬ್ಬರ ರೋಗ ಕಾಣಿಸುತ್ತಿದ್ದು ಸುಮಾರು 50 ರಿಂದ 60 ಜನರಿಗೆ ಈ ರೋಗ ಬಂದು ಹೋಗಿದೆ.
ಸದ್ಯ ಏಳೆಂಟು ಪ್ರಕರಣಗಳು ಇದ್ದು, ಈ ಕುರಿತು ಡಬ್ಲುಎಚ್ಓ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ. ಮಂಗಳವಾರ ವಿಜಯಪುರದಿಂದ ಆಗಮಿಸಿದ ವೈದ್ಯರ ತಂಡವು ರಬಕವಿಯಲ್ಲಿ ಆಯಾ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ಒದಗಿಸಿದರು.
ಏನಿದು ರೋಗ?:
ಸಾಮಾನ್ಯವಾಗಿ ಮೀಜಲ್ಸ್ ರೋಗವೆಂದು ಕರೆಯುವ ಗ್ರಾಮೀಣ ಭಾಷೆಯಲ್ಲಿ ಗೊಬ್ಬರ ರೋಗವೆನ್ನುವದು ಸಾಮಾನ್ಯವಾಗಿ ಎಲ್ಲರಿಗೂ ಬಂದು ಹೋಗುತ್ತಿರುತ್ತವೆ. ಇದೀಗ ರಬಕವಿಯಲ್ಲಿ ಕಳೆದ ಮೂರು ತಿಂಗಳ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿದ್ದು ವೈದ್ಯರ ತಂಡವು ಪರಿಶೀಲನೆಗೆ ಕಾರಣವಾಗಿದೆ.
ಮಾದರಿ ಪರೀಕ್ಷೆ:
ಏಳೆಂಟು ರೋಗಿಗಳ ರಕ್ತದ ಮಾದರಿ ಪರೀಕ್ಷೆಯನ್ನು ಪಡೆದುಕೊಂಡು ಪ್ರಯೋಗಾಲಯಕ್ಕೆ ಕಳಿಸಿದ್ದು, ಈ ಬಗ್ಗೆ ನಿಖರ ಮಾಹಿತಿ ವರದಿ ನಂತರ ತಿಳಿಯಲಿದೆ ಎಂದು ವೈದ್ಯಾಧಿಕಾರಿ ಡಾ. ಎಂ.ಎಚ್. ನದಾಫ್ ತಿಳಿಸಿದರು.
ಮಲೀನ ಕಾರಣ
ಈ ಪ್ರದೇಶದಲ್ಲಿ ಸ್ವಚ್ಛತೆಯೆಂಬುದು ಗಗನಕುಸುಮವಾಗಿದೆ. ಎಲ್ಲೆಂದರಲ್ಲಿ ಅಂಟಿಕೊಂಡ ಮನೆಗಳು, ರಸ್ತೆಯುದ್ದಕ್ಕೂ ಮಲೀನತೆಯೊಂದಿಗೆ ಎಲ್ಲ ಮನೆಗಳ ಮುಂದೆ ಅಲ್ಲಿಯೇ ಸ್ನಾನ, ಊಟ, ನಿದ್ರೆ ಹೀಗಿರುವದರಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳಿಗೆ ಹೆಚ್ಚಿನ ಅವಕಾಶವಾಗುವಲ್ಲಿ ಕಾರಣವಾಗಿದೆ. ಇವೆಲ್ಲವುಗಳ ನಿರ್ಲಕ್ಷ್ಯದಿಂದಲೇ ಇಂತಹ ರೋಗಗಳ ಆಹ್ವಾನಕ್ಕೆ ಕಾರಣವಾಗಿದೆ ಎಂಬುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.
ಈ ಕುರಿತು ವೈದ್ಯರ ತಂಡದಿಂದ ಅಧ್ಯಯನ ನಡೆಯುತ್ತಿದ್ದು, ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಆರೋಗ್ಯ ಇಲಾಖೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ.