ಉಡುಪಿ: ಕರ್ನಾಟಕದ ಸುರಕ್ಷತೆ ಹಾಗೂ ಅಭಿವೃದ್ಧಿಗಾಗಿ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಯನ್ನು ಬೆಂಬಲಿಸಬೇಕು. ಆ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗುವಂತಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದರು.
ಶನಿವಾರ ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿಯಲ್ಲಿ ಉಡುಪಿ ಮತ್ತು ಕಟಪಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣೆ ಪ್ರಚಾರ ಭಾಷಣ ಮಾಡಿದರು.
ಬಿಜೆಪಿಯದು ಡಬಲ್ ಇಂಜಿನ್ ಸರ್ಕಾರ. ಕಾಂಗ್ರೆಸ್‌ನದು ರಿವರ್ಸ್ ಗೇರ್ ಸರ್ಕಾರ. ಅಭಿವೃದ್ಧಿ ಆಧರಿತ ಡಬಲ್ ಇಂಜಿನ್ ಸರ್ಕಾರ ಬೇಕೇ ಅಥವಾ ಧರ್ಮ ವಿಭಜನೆಯ ರಿವರ್ಸ್ ಗೇರ್ ಸರ್ಕಾರ ಬೇಕೇ ಎಂದು ಮತದಾರರು ನಿರ್ಧರಿಸಬೇಕಾಗಿದೆ ಎಂದರು.
ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್, ಪಿಎಫ್‌ಐನಂಥ ದೇಶದ್ರೋಹಿ ಸಂಘಟನೆಗಳೊಂದಿಗೆ ಸಖ್ಯ ಮಾಡಿಕೊಂಡರೆ, ದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ತೊಡಕಾಗಿದ್ದ ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡುವ ಮೂಲಕ ಬಿಜೆಪಿ, ದೇಶದ ಸುರಕ್ಷತೆಗೆ ಆದ್ಯತೆ ನೀಡಿದೆ. ತುಷ್ಟೀಕರಣ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಈಗಾಗಲೇ ಬಿಜೆಪಿ ಜಾರಿಗೆ ತಂದಿರುವ ಮತಾಂತರ ಗೋ ಹತ್ಯೆ ನಿಷೇಧ ಕಾಯ್ದೆಯ ಮರು ಜಾರಿ, ಎಸ್.ಸಿ. ಎಸ್.ಟಿ., ಒಕ್ಕಲಿಗರು ಮೊದಲಾದವರಿಗೆ ಜಾರಿಗೆ ತರಲಾದ ಮೀಸಲಾತಿ ರದ್ದತಿ, ಮುಸ್ಲಿಮರಿಗೆ 4 ಶೇ. ಮೀಸಲಾತಿ ಜಾರಿ ಮಾಡುತ್ತದೆ ಎಂದರು.
ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಜಾತಿ ಆಧಾರಿತ ಮೀಸಲಾತಿ ವಿರೋಧಿಸಿದ್ದರು. ಆ ಕಾರಣದಿಂದ ಬಿಜೆಪಿ ಮುಸ್ಲಿಮರ ೪ ಶೇ. ಮೀಸಲಾತಿ ರದ್ದುಗೊಳಿಸಿದೆ. ಅದನ್ನು ಮರು ಸ್ಥಾಪಿಸುವುದಾಗಿ ಹೇಳುವ ಕಾಂಗ್ರೆಸ್ ಯಾವ ಸಮುದಾಯದ ಮೀಸಲಾತಿ ಕಸಿದುಕೊಂಡು ಸಮದೂಗಿಸಿಕೊಳ್ಳುತ್ತದೆ? ಎಸ್.ಸಿ, ಎಸ್.ಟಿ ಮೀಸಲಾತಿಯೋ ಅಥವಾ ಲಿಂಗಾಯಿತರು ಹಾಗೂ ಒಕ್ಕಲಿಗರಿಗೆ ನೀಡಿದ ಮೀಸಲಾತಿಯನ್ನು ಕಸಿದುಕೊಂಡು ಸಮದೂಗಿಸುತ್ತದೆಯೋ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಅಮಿತ್ ಶಾ ಆಗ್ರಹಿಸಿದರು.
ನರೇಂದ್ರ ಮೋದಿ ಹೋದೆಡೆಯಲ್ಲೆಲ್ಲಾ ಅದ್ದೂರಿ ಸ್ವಾಗತ ಲಭಿಸುತ್ತಿದೆ. ಆದರೆ, ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರು ಮಾತ್ರ ವಿಷದ ಮಾತುಗಳನ್ನಾಡುತ್ತಾರೆ ಎಂದ ಅಮಿತ್ ಶಾ, ಖರ್ಗೆ ಮಾತಿಗೆ ಪ್ರತಿಯಾಡಿzರು. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮೊದಲಾದವರು ಕಾಂಗ್ರೆಸ್‌ಗೆ ಬೈದಷ್ಟೂ ಬಿಜೆಪಿ ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ಈಗಾಗಲೇ ಗುಜರಾತ್, ಅಸ್ಸಾಂ, ತ್ರಿಪುರಾ, ಮಣಿಪುರ ಮೊದಲಾದೆಡೆಗಳಲ್ಲಿ ನೀಡಿದ್ದು, ಅಲ್ಲೆಲ್ಲಾ ಯಾವುದೇ ಗ್ಯಾರಂಟಿ ಅನುಷ್ಠಾನವಾಗಿಲ್ಲ. ಉತ್ತರ ಪ್ರದೇಶದಲ್ಲಿ ಒಂದು ಸೀಟು ಕೂಡಾ ಗೆಲ್ಲಲಾಗಿಲ್ಲ. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್‌ಗೇ ಗ್ಯಾರಂಟಿ ಇಲ್ಲದಿರುವಾಗ ಅದರ ಕಾರ್ಡಿಗೇನು ಗ್ಯಾರಂಟಿ ಎಂದು ಪ್ರಶ್ನಿಸಿದರು.
ಕರಾವಳಿ ಕರ್ನಾಟಕ ಬಿಜೆಪಿಯ ಶಕ್ತಿ. ಈ ಬಾರಿಯ ಚುನಾವಣೆಯಲ್ಲಿ ಕರಾವಳಿ ಕರ್ನಾಟಕದ ಒಂದೇ ಒಂದು ಸೀಟು ಕೂಡಾ ಕಾಂಗ್ರೆಸ್ ಪಾಲಾಗಬಾರದು. ಜೆಡಿಎಸ್‌ಗೆ ಮತ ನೀಡುವುದೆಂದರೆ ಕಾಂಗ್ರೆಸ್‌ಗೆ ಮತ ನೀಡಿದಂತೆಯೇ ಎಂದು ಅಮಿತ್ ಶಾ ವ್ಯಾಖ್ಯಾನಿಸಿದರು.
೧೧ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆ ಮೋದಿ ಆಡಳಿತಾವಧಿಯಲ್ಲಿ ೫ನೇ ಸ್ಥಾನಕ್ಕೆ ತಲುಪಿದೆ. ಡಿಜಿಟಲ್ ಆರ್ಥಿಕತೆಯಲ್ಲಿ ಭಾರತ ಮೊದಲನೇ ಸ್ಥಾನದ್ದರೆ, ಮೊಬೈಲ್ ಉತ್ಪಾದನೆಯಲ್ಲಿ ೨, ಎವಿಎಸ್ ಮ್ಯಾನೇಜ್ ಮೆಂಟ್ ಮತ್ತು ಸ್ಟಾರ‍್ಟ್ ಅಪ್ ನಲ್ಲಿ ೩, ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ೪ನೇ ಸ್ಥಾನದಲ್ಲಿದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣ, ನಾರಾಯಣಗುರು ಅಧ್ಯಯನ ಕೇಂದ್ರ, ಕಾಶಿ ಬದರಿ ಮೊದಲಾದ ಕ್ಷೇತ್ರಗಳ ನವೀಕರಣ, ಪೇಜಾವರ ಶ್ರೀ ಸ್ಮೃತಿವನ ನಿರ್ಮಾಣ ಹೀಗೆ ಭಾರತೀಯ ಸಂಸ್ಕೃತಿ ರಕ್ಷಣೆ, ಶಿಕ್ಷಣ ನೀತಿಯಲ್ಲಿ ಬದಲಾವಣೆ, ಮೀನುಗಾರರಿಗೆ ಸವಲತ್ತು, ಅಡಿಕೆ ಆಮದು ಸುಂಕ ವಿಧಿಸುವ ಮೂಲಕ ಅಡಿಕೆ ಬೆಳೆಗಾರರಿಗೆ ಅನುಕೂಲತೆ ಒದಗಿಸಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಅಮಿತ್ ಶಾ ಹೇಳಿದರು.
ಕಳೆದ ೯ ವರ್ಷದ ಮೋದಿ ಆಡಳಿತದಲ್ಲಿ ಕರ್ನಾಟಕಕ್ಕೆ ೨ ಲಕ್ಷ ೨೬ ಸಾವಿರದ ೧೮ ಸಾವಿರ ಕೋಟಿ ರೂ. ಅನುದಾನ ಬಂದಿದೆ. ಆದರೆ, ಮನಮೋಹನ ಸಿಂಗ್ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಬಂದಿರುವುದು ಕೇವಲ ೯೯ ಸಾವಿರ ಕೋಟಿ ಎಂದರು.