ಮಂಗಳೂರು: ಚಿರತೆಯೊಂದು ಉರುಳಿಗೆ ಸಿಕ್ಕಿ ಒದ್ದಾಡಿ ಸಾವನ್ನಪ್ಪಿರುವ ಘಟನೆ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಮಿತ್ತಬೆಟ್ಟು ಬಳಿ ನಡೆದಿದೆ.
ಉಳೆಪಾಡಿ ಮಿತ್ತಬೆಟ್ಟು ಬಳಿ ಗುಡ್ಡೆಯಲ್ಲಿ ಸ್ಥಳೀಯರು ಕಾಡು ಪ್ರಾಣಿಗಳ ಹಾವಳಿ ತಡೆಯಲಾರದೆ ಇಟ್ಟಿದ್ದ ಉರುಳಿಗೆ ಚಿರತೆ ರಾತ್ರಿ ಹೊತ್ತು ಬಿದ್ದಿದೆ. ಬೆಳಿಗ್ಗೆ ಸ್ಥಳೀಯ ಮನೆಯವರು ಗುಡ್ಡೆಯಲ್ಲಿ ನಾಯಿ ಬೊಗಳುವ ಶಬ್ದ ಕೇಳಿ ಭಯಭೀತರಾಗಿ ಸ್ಥಳಕ್ಕೆ ಧಾವಿಸಿದಾಗ ಉರುಳಿಗೆ ಚಿರತೆ ಬಿದ್ದು ಒದ್ದಾಡುತ್ತಿರುವುದು ಕಂಡು ಬಂದಿದೆ.
ಕೂಡಲೇ ಐಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಮತ್ತು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಬರುವ ಮೊದಲು, ಚಿರತೆ ಉರುಳಿಗೆ ಸಿಕ್ಕಿ ಒದ್ದಾಡಿ ಪ್ರಾಣ ಬಿಟ್ಟಿದೆ.
ಐಕಳ ಗ್ರಾ.ಪಂ. ವ್ಯಾಪ್ತಿಯ ಉಳೆಪಾಡಿ ಪರಿಸರದಲ್ಲಿ ಕಳೆದ ಕೆಲವು ತಿಂಗಳಿನಿಂದ ಚಿರತೆಯ ಕಾಟ ವಿಪರೀತವಾಗಿದ್ದು ಸ್ಥಳೀಯರು ಭಯಬೀತರಾಗಿದ್ದರು. ಕಳೆದ ಕೆಲವು ತಿಂಗಳಿನಿಂದ ಸ್ಥಳೀಯರ ಅನೇಕ ಸಾಕು ನಾಯಿಗಳು ಚಿರತೆಗೆ ಆಹಾರವಾಗಿದ್ದವು.
ಮೂಡಬಿದ್ರೆ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಎಸಿಎಫ್ ಸತೀಶ್, ಕಿನ್ನಿಗೋಳಿ ಬೀಟ್ ಫಾರೆಸ್ಟರ್ ರಾಜು, ಡಿಆg ಎಫ್ ನಾಗೇಶ್ ಬಿಲ್ಲವ, ಬೀಟ್ ಫಾರೆಸ್ಟರ್ ಸಂತೋಷ್ ಭೇಟಿ ನೀಡಿ ಪರಿಶೀಲಿಸಿದ್ದು ಚಿರತೆಯ ಶವವನ್ನು ಮಹಜರು ನಡೆಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.