Home ತಾಜಾ ಸುದ್ದಿ ಕನ್ನಡ ನಟಿ ರನ್ಯಾ ರಾವ್‌ಗೆ ಇಡಿ ಶಾಕ್, ಆಸ್ತಿ ಜಪ್ತಿ

ಕನ್ನಡ ನಟಿ ರನ್ಯಾ ರಾವ್‌ಗೆ ಇಡಿ ಶಾಕ್, ಆಸ್ತಿ ಜಪ್ತಿ

ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಕನ್ನಡದ ನಟಿ ರನ್ಯಾ ರಾವ್‌ಗೆ ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಮಾರ್ಚ್‌ 3ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಬಂಧಿಸಲಾಗಿತ್ತು. ಸದ್ಯ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ರನ್ಯಾ ರಾವ್‌ಗೆ ಸೇರಿದ ಬೆಂಗಳೂರು ಮತ್ತು ತುಮಕೂರಿನಲ್ಲಿರುವ 34.12 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇಡಿ ಮಾಹಿತಿಯನ್ನು ನೀಡಿದೆ.

14.8 ಕೆಜಿ ಚಿನ್ನವನ್ನು ಕಳ್ಳ ಸಾಗಣೆ ಮಾಡುವಾಗ ರನ್ಯಾ ರಾವ್‌ ಬಂಧಿಸಲಾಗಿತ್ತು. ಈ ಪ್ರಕರಣದ ಸಂಬಂಧ ಸಿಬಿಐ ಮತ್ತು ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತನಿಖೆ ನಡೆಯುತ್ತಿದೆ. ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದೆ.

ಮಾಹಿತಿಗಳ ಪ್ರಕಾರ ಇಡಿ ರನ್ಯಾ ರಾವ್‌ಗೆ ಸೇರಿದ ಬೆಂಗಳೂರಿನ ಅರ್ಕಾವತಿ ಬಡವಾಣೆಯ ನಿವೇಶನ, ವಿಕ್ಟೋರಿಯಾ ಲೇಔಟ್‌ನ ಮನೆ, ಆನೇಕಲ್‌ನಲ್ಲಿರುವ ಕೃಷಿ ಭೂಮಿ ಮತ್ತು ತುಮೂರಿನಲ್ಲಿರುವ ಜಮೀನು ಸೇರಿ 34.12 ಕೋಟಿ ರೂ. ಮೊತ್ತದ ಆಸ್ತಿಯ್ನು ಜಪ್ತಿ ಮಾಡಿ, ಮುಟ್ಟುಗೋಲು ಹಾಕಿಕೊಂಡಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಬಂಧಿಸಿದಾಗ ಸುಮಾರು 12.56 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆಯಾಗಿತ್ತು. ಅಧಿಕಾರಿಗಳು ಬಳಿಕ ರನ್ಯಾ ರಾವ್ ನಿವಾಸದ ಮೇಲೆ ದಾಳಿ ಮಾಡಿದ್ದರು. ಆಗ 2.67 ಕೋಟಿ ಮೌಲ್ಯದ ದಾಖಲೆ ಇಲ್ಲದ ಹಣ, 2.06 ಕೋಟಿ ಮೌಲ್ಯದ ಚಿನ್ನದ ಆಭರಣಗಳು ಸಿಕ್ಕಿದ್ದವು.

ರನ್ಯಾ ರಾವ್ ಇತರ ಆರೋಪಿಗಳ ಜೊತೆ ಸೇರಿಕೊಂಡು ದುಬೈ ಮತ್ತು ಉಗಾಂಡಾದ ಪೂರೈಕೆದಾರರಿಂದ ಚಿನ್ನ ಖರೀದಿಸಿ, ಹವಾಲಾ ಮೂಲಕ ನಗದು ಪಾವತಿ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ಆದ್ದರಿಂದ ಜಾರಿ ನಿರ್ದೇಶನಾಲಯ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದೆ.

33 ವರ್ಷದ ನಟಿ ರನ್ಯಾ ರಾವ್‌ಗೆ ಬೆಂಗಳೂರಿನ ಆರ್ಥಿಕ ವ್ಯವಹಾರಗಳ ವಿಶೇಷ​​ ಕೋರ್ಟ್​ ಜಾಮೀನು ನೀಡಿದೆ. 2 ಲಕ್ಷ ರೂ.ಗಳ ಎರಡು ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಿದೆ. ದೇಶ ಬಿಟ್ಟು ಹೋಗಬಾರದು ಎಂದು ಷರತ್ತು ವಿಧಿಸಿದೆ. ಆದರೆ ಕೋಫೆಪೋಸಾ ಪ್ರಕರಣ ದಾಖಲಾಗಿರುವ ಕಾರಣ ಅವರು ಜೈಲಿನಲ್ಲಿಯೇ ಇದ್ದಾರೆ.

Exit mobile version