ಯಲಬುರ್ಗಾ(ಕೊಪ್ಪಳ): ಹಿಂದೂತ್ವದ ಬಗ್ಗೆ ಮಾತನಾಡುವವರಿಗೆ ಏನು ಗೊತ್ತು ಬದನೆಕಾಯಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಹಿರೇವಂಕಲಕುಂಟಾ ಗ್ರಾಮದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ, `ಬಾಲಕಿಯರ ನೂತನ ಸರ್ಕಾರಿ ಪ್ರೌಢ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ದೇವಸ್ಥಾನಗಳಿಗೆ ದುಡ್ಡು ಕೊಡುವುದಿಲ್ಲ. ದೇವಸ್ಥಾನದ ಗಂಟೆ ಬಾರಿಸಿದರೆ ಏನಾಗುತ್ತದೆ, ಶಾಲೆಗಳ ಗಂಟೆ ಬಾರಿಸಿದರೆ ದೇಶದ ಅಭಿವೃದ್ಧಿಯಾದರೂ ಆಗುತ್ತದೆ. ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಹೇರ್ ಸ್ಟೈಲ್ ಹೀಗೆ ಇರುತ್ತದೆ. ಹೇರ್‌ಕಟ್ ಮಾಡಿದಾಗ ನಮ್ಮಪ್ಪ ನನ್ನ ಜೊತೆ ಮಾತಾಡೋದೇ ಬಿಟ್ಟಿದ್ದರು. ನಿನ್ನ ಮುಖ ನೋಡುವುದಕ್ಕೆ ಆಗುತ್ತಿಲ್ಲ ಎಂದಿದ್ದರು. ಈಗ ನಾನು ನೋಡುವುದಕ್ಕೆ ಚೆನ್ನಾಗಿದ್ದೀನಿ ಅಲ್ಲವೇ?, ನಿಮ್ಮ ಚಪ್ಪಾಳೆಯೇ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಉತ್ತರ ಎಂದು ತಿರುಗೇಟು ನೀಡಿದರು.
ಬಾಯಿ ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ
ಸಿಎಂ ಬದಲಾವಣೆ ವಿಚಾರವಾಗಿ ನಮಗೆ ಬಾಯಿ ಮುಚ್ಚಿಕೊಂಡು ಇರುವಂತೆ ಹೇಳಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಾಯಿ ತೆರೆದರೂ ಏನೂ ಉಪಯೋಗ, ಸಿಎಂ ಬದಲಾವಣೆ ವಿಚಾರದಲ್ಲಿ ನಾನು ಗಪ್‌ಚುಪ್ ಇರುತ್ತೇನೆ. ಸುರ್ಜೇವಾಲಾ ನಮ್ಮ ನಾಯಕರು. ಸಭೆ ಮಾಡಿಕೊಂಡು ಹೋಗುತ್ತಾರೆ ಎಂದರು.