Home ತಾಜಾ ಸುದ್ದಿ ಅಂತೂ ಐಶ್ವರ್ಯಗೆ ಬಂತು ಆಧಾರ್ ಕಾರ್ಡ್

ಅಂತೂ ಐಶ್ವರ್ಯಗೆ ಬಂತು ಆಧಾರ್ ಕಾರ್ಡ್

ಬಾಗಲಕೋಟೆ(ಕುಳಗೇರಿ ಕ್ರಾಸ್): ಆಧಾರ್ ಕಾರ್ಡ್ ಪಡೆಯಲು ಅಲೆದು ಸುಸ್ತಾಗಿದ್ದ ಆಲೂರು ಎಸ್‌ಕೆ ಗ್ರಾಮದ 18 ವರ್ಷದ ಅಂಗವಿಕಲ ಯುವತಿ ಐಶ್ವರ್ಯಳಿಗೆ ಬಾದಾಮಿ ತಹಶೀಲ್ದಾರ್ ಕಾವ್ಯಶ್ರೀ.ಎಚ್. ಅವರು ಆಧಾರ್ ಕಾರ್ಡ್ ಒದಗಿಸಲು ಕ್ರಮ ಕೈಗೊಂಡರು.
ಒಂದೂವರೆ ವರ್ಷದಿಂದ ಆಧಾರ್ ಕಾರ್ಡ್ ಆಪಡೇಟ್ ಆಗಿಲ್ಲ, ಆಧಾರ್ ಇಲ್ಲದೆ ಬ್ಯಾಂಕ್ ಖಾತೆ ಇ ಕೆವೈಸಿ ಮಾಡಿಲ್ಲ. ಇದರಿಂದ ಸರ್ಕಾರದ ಮಾಸಾಶನ ಬರುತ್ತಿಲ್ಲ ಎಂದು ಅಂಗವಿಕಲ ಬಾಲಕಿ ಐಶ್ವರ್ಯ ಗುರಪ್ಪ ಹಿರ್ಲವರ ಪತ್ರಿಕೆ ಎದುರು ತನ್ನ ಅಳಲು ತೋಡಿಕೊಂಡಿದ್ದಳು.
ಈ ವಿಷಯವಾಗಿ ಸಂಯುಕ್ತ ಕರ್ನಾಟಕ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತ ಕಂದಾಯ ಅಧಿಕಾರಿಗಳು ಐಶ್ವರ್ಯಳ ಮನೆಗೆ ಭೇಟಿ ನೀಡಿ ಆಧಾರ್ ಕಾರ್ಡ್ ಒದಗಿಸಲು ಮುಂದಾದರು.
ಬಾದಾಮಿ ತಹಶೀಲ್ದಾರ್ ಕಾವ್ಯಶ್ರೀ.ಎಚ್. ಸೂಚನೆ ನೀಡಿದ ಬಳಿಕ ಉಪ ತಹಶೀಲ್ದಾರ್ ಮೊಮೀನ, ಕಂದಾಯ ನಿರೀಕ್ಷಕ ವೆ.ಎ.ವಿಶ್ವಕರ್ಮ, ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣ ತಳವಾರ, ಯಲ್ಲಪ್ಪ ತಳವಾರ ಸೇರಿದಂತೆ ಗ್ರಾಮ ಸಹಾಯಕರು ಭೇಟಿ ನೀಡಿದ್ದು ಐಶ್ವರ್ಯ, ಸಿದ್ಧಾರೂಢ, ನಾಗರಾಜ ಹಿರ್ಲವರ ಅವರ ಕ್ಷೇಮ ವಿಚಾರಿಸಿದರು.
ನಂತರ ಮೂವರು ಮಕ್ಕಳೊಂದಿಗೆ ಪೋಷಕರು ಬಾಗಲಕೋಟೆ ಜಿಲ್ಲಾಧಿಕಾರಿ ಭವನದಲ್ಲಿನ ಆಧಾರ್ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಆಧಾರ್ ಕಾರ್ಡ್ ಮಾಡಿಸಿ ಮರಳಿ ಕಳುಹಿಸುವ ಮೂಲಕ ಮಾನವೀಯತೆ ಮೆರೆದರು.

Exit mobile version