ಸತೀಶ್ ನೀನಾಸಂ ಹಾಗೂ ಸಪ್ತಮಿ ಗೌಡ ಪ್ರಮುಖ ಭೂಮಿಕೆಯಲ್ಲಿರುವ ದ ರೈಸ್ ಆಫ್ ಅಶೋಕ ಚಿತ್ರದ ಮಹಾದೇವ ಎಂಬ ಮೊದಲ ಹಾಡು ಬಿಡುಗಡೆಗೊಂಡಿದೆ. ಈ ಹಾಡು ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು ಕನ್ನಡದಲ್ಲಿ ನಟ ನೀನಾಸಂ ಸತೀಶ್ ಸಾಹಿತ್ಯ ಬರೆದಿರುವುದು ವಿಶೇಷ. ಕೈಲಾಶ್ ಖೇರ್ ಕಂಠದಲ್ಲಿ ಈ ಹಾಡು ಮೂಡಿಬಂದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ.
ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿದೆ. ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿ ಮಗ್ನವಾಗಿರುವ ಚಿತ್ರತಂಡ, ಬಿಡುಗಡೆಯ ಸಿದ್ಧತೆಯಲ್ಲಿದೆ. ಅದಕ್ಕೂ ಮೊದಲು ಒಂದೊಂದೇ ಕಮಟೆಂಟ್ ಹರಿಬಿಡಲು ಆಲೋಚಿಸಿರುವ ಟೀಂ ಅಶೋಕ, ಆರಂಭವಾಗಿ ಮಹಾದೇವ ಎಂಬ ಮೊದಲ ಹಾಡು ಬಿಡುಗಡೆಗೊಳಿಸಿದೆ.
ದ ರೈಸ್ ಆಫ್ ಅಶೋಕ 70-80ರ ದಶಕದ ಕಥೆಯಾಗಿದ್ದು, ಹಳ್ಳಿಗಳಲ್ಲಿ ಜನರು ಹಬ್ಬ, ಜಾತ್ರೆಗಳನ್ನು ಹೇಗೆ ಸಂಭ್ರಮಿಸುತ್ತಾರೆ ಎಂಬ ಪರಿಚಯ ಈ ಹಾಡಿನಲ್ಲಿ ಅನಾವರಣಗೊಳ್ಳಲಿದೆ. ಜಾನಪದ ಶೈಲಿಯ ಜತೆಗೆ ಸಿನಿಮೀಯ ಸ್ಪರ್ಶ ನೀಡಲಾಗಿದೆ. ಡೊಳ್ಳು, ನಗಾರಿ ಜತೆಗೆ ಪಾಶ್ಚಿಮಾತ್ಯ ವಾದ್ಯ ಬಳಸಿ ಈ ಹಾಡನ್ನು ರೆಡಿ ಮಾಡಲಾಗಿದೆ. ಕೈಲಾಶ್ ಖೇರ್ ಜತೆ 15ಕ್ಕೂ ಹೆಚ್ಚು ಮೈಸೂರಿನ ರಂಗ ಗಾಯಕರು ಧ್ವನಿಗೂಡಿಸಿದ್ದಾರೆ.
ಕನ್ನಡದಲ್ಲಿ ಸತೀಶ್ ನೀನಾಸಂ, ತೆಲುಗಿನಲ್ಲಿ ಶ್ರೀನಿವಾಸ್ ಕಾಲೇ ಹಾಗೂ ತಮಿಳಿನಲ್ಲಿ ವೈರ ಭಾರತಿ ಸಾಹಿತ್ಯ ರಚಿಸಿದ್ದಾರೆ. ಮೂರು ಭಾಷೆಯ ಪ್ರೇಕ್ಷಕರಿಗೂ ಹತ್ತಿರವಾಗುವ ರೀತಿಯಲ್ಲಿ ಹಾಡು ಮೂಡಿಬಂದಿದೆ ಎಂಬುದು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅನಿಸಿಕೆ.
ಇನ್ನು ಈ ಚಿತ್ರದ ಆಡಿಯೋ ಹಕ್ಕು ಲಹರಿ ಆಡಿಯೋ ಸಂಸ್ಥೆಗೆ ದೊಡ್ಡ ಮೊತ್ತಕ್ಕೆ ಬಿಕರಿಯಾಗಿದ್ದು, ಸತೀಶ್ ಸಿನಿ ಕೆರಿಯರ್‌ನಲ್ಲೇ ಬೃಹತ್ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ.
ದ ರೈಸ್ ಆಫ್ ಅಶೋಕ ಚಿತ್ರದಲ್ಲಿ ಒಟ್ಟು 9 ಹಾಡುಗಳಿವೆ. ಆರು ಸಾಂಗ್ಸ್, 3 ಬಿಟ್‌ಗಳಿವೆ. ಎಲ್ಲವೂ ದೇಸಿ ಸೊಗಡಿನ ಹಿನ್ನೆಲೆಯಲ್ಲಿ ಮೂಡಿಬಂದಿವೆ. ಆರಂಭದ ದಿನಗಳಿಂದಲೂ ಈ ಚಿತ್ರಕ್ಕೆ ಒಂದಲ್ಲ ಒಂದು ತೊಡಕುಗಳು ಎದುರಾಗುತ್ತಿದ್ದವು. ಅದನ್ನೆಲ್ಲ ಮೆಟ್ಟಿ ನಿಂತು ಇಲ್ಲೀವರೆಗೂ ಸಿನಿಮಾವನ್ನು ತಂದು ನಿಲ್ಲಿಸುವಲ್ಲಿ ನಾಯಕ ಸತೀಶ್ ನೀನಾಸಂ ಹೋರಾಟ ಸಾಕಷ್ಟಿದೆ.
ಅದು ಒಬ್ಬ ಕಲಾವಿದನ ದೊಡ್ಡತನ ಮತ್ತು ಅವರ ಬದ್ಧತೆಗೆ ಸಾಕ್ಷಿ. ಮೂರು ಭಾಷೆಗಳಲ್ಲೂ ಪ್ರೇಕ್ಷಕರಿಗೆ ಹತ್ತಿರವಾಗುವ ಕಂಟೆಂಟ್ ಈ ಚಿತ್ರದಲ್ಲಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ನಂಬಿಕೆಯಿದೆ ಎಂದು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಹೇಳಿದ್ದಾರೆ.
