ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಈಗಾಗಲೇ ನಾಯಕನಾಗಿ ಪ್ರಜ್ವಲ್ ದೇವರಾಜ್ ನಟಿಸುತ್ತಿದ್ದು, ಇತ್ತೀಚೆಗೆ ರಾಜ್ ಬಿ. ಶೆಟ್ಟಿ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದರು. ಕಂಬಳ ಪರಂಪರೆಯ ಶಕ್ತಿ, ಓಜಸ್ಸು ಹಾಗೂ ಭೂಮಿತಾಯಿಯ ಮನುಷ್ಯ ಮತ್ತು ಪ್ರಾಣಿಗಳ ನಂಟನ್ನು ಆಧರಿಸಿದ ಕಥೆಯಲ್ಲಿ ರಾಜ್ ಅವರು ಪಂಜು ಹಿಡಿದ ಮಹಾವೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಹಿಂದೆ ಸಿನಿಮಾ ತಂಡ ಹಂಚಿಕೊಂಡಿತ್ತು.
ಈಗ ರಾಜ್ ಬಿ. ಶೆಟ್ಟಿ ಪಾತ್ರಕ್ಕೆ ಜೋಡಿಯಾಗಿ ಸುಷ್ಮಿತಾ ಭಟ್‌ರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈಗಾಗಲೇ ಎರಡು ಸಿನಿಮಾದಲ್ಲಿ ನಟಿಸಿರುವ ಸುಷ್ಮಿತಾ ಭಟ್‌ಗೆ ‘ಕರಾವಳಿ’ ಮೂರನೇ ಸಿನಿಮಾ ಆಗಿದ್ದು, ಈ ಪಾತ್ರವು ಅವರ ಕರಿಯರ್‌ಗೆ ಹೊಸ ಚಾಲನೆ ನೀಡಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಶೂಟ್‌ಗಳ ಮೂಲಕ ಗಮನಸೆಳೆದ ಸುಷ್ಮಿತಾ ಭಟ್, ಮಂಗಳೂರಿನ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿನಯದ ಅವಕಾಶದ ಬಗ್ಗೆ ಮಾತನಾಡಿದ ಅವರು ಈ ಸಿನಿಮಾ ಮಾಡಬೇಕೆಂಬ ನಿರ್ಧಾರಕ್ಕೆ ಮೊದಲ ಕಾರಣ ರಾಜ್ ಬಿ. ಶೆಟ್ಟಿ. ಅವರಿಂದ ಕಲಿಯಬಹುದಾದ ವಿಷಯಗಳು ಅನೇಕ. ಚಿತ್ರೀಕರಣ ಕಡಿಮೆ ದಿನಗಳಷ್ಟೇ ನಡೆದರೂ ಅದರಲ್ಲಿ ಅಪಾರ ಅನುಭವ ಸಿಕ್ಕಿದೆ. ರಾಜ್ ಪವರ್‌ಹೌಸ್ ನಟ—ಸೆಟ್‌ನಲ್ಲಿ ಯಾವಾಗಲೂ ಎನರ್ಜಿ ತುಂಬಿರುತ್ತಾರೆ ಎಂದರು.
ಸಿನಿಮಾದ ತಾಂತ್ರಿಕ ಮತ್ತು ಕಲಾವಿದರ ತಂಡ: ‘ಕರಾವಳಿ’ ಸಿನಿಮಾದಲ್ಲಿ ರಮೇಶ್ ಇಂದಿರ ಸಹ ಇದ್ದು. ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ. ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್‌ನಲ್ಲಿ ಗಾಣಿಗ ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥಾಹಂದರ ಹೊಂದಿದೆ. ಸಚಿನ್ ಬಸ್ರೂರು ಸಂಗೀತ ಸಂಯೋಜನೆ, ಅಭಿಮನ್ಯು ಸದಾನಂದನ್ ಕ್ಯಾಮೆರಾ ಕೈಚಳಕವಿದೆ.
ಕರಾವಳಿ: ಪ್ರೇಕ್ಷಕರ ನಿರೀಕ್ಷೆಯ ಸಿನಿಮಾವಾಗಿದ್ದು ಕಂಬಳ, ಸಮುದ್ರ ಕರಾವಳಿ ಸಂಸ್ಕೃತಿ, ಮನುಷ್ಯ-ಪ್ರಕೃತಿ ಸಂಬಂಧ, ಆಕ್ಷನ್ ಮತ್ತು ಭಾವುಕತೆಯ ಸಂಯೋಜನೆಯೊಂದಿಗೆ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ತಂಡ ಹೇಳಿಕೆ ನೀಡಿದೆ.
