Home ಸಿನಿ ಮಿಲ್ಸ್ ‘ಕಾಂತಾರ: ಚಾಪ್ಟರ್ 1’ ಈಗ ಓಟಿಟಿಗೆ ಬರಲು ಸಜ್ಜು

‘ಕಾಂತಾರ: ಚಾಪ್ಟರ್ 1’ ಈಗ ಓಟಿಟಿಗೆ ಬರಲು ಸಜ್ಜು

0

ಮುಂಬೈ: ಇದೇ ತಿಂಗಳ ಆರಂಭದಲ್ಲಿ (ಅಕ್ಟೋಬರ್ 2) ಬಿಡುಗಡೆಯಾದ ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಚಿತ್ರವು ವಿಶ್ವದಾದ್ಯಂತ ಭಾರೀ ಯಶಸ್ಸು ಕಂಡು, ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮುರಿಯುತ್ತಿದೆ. ಈಗ ಚಿತ್ರಪ್ರೇಕ್ಷಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ — ಈ ಬೃಹತ್ ಚಿತ್ರವು ಶೀಘ್ರದಲ್ಲೇ ಓಟಿಟಿ (OTT) ಮೂಲಕ ಮನೆ ಬಾಗಿಲಿಗೆ ಬರಲಿದೆ.

‘ಕಾಂತಾರ – ಒಂದು ದಂತಕಥೆ’ ಚಿತ್ರದಿಂದ ಅಪಾರ ಜನಪ್ರಿಯತೆ ಪಡೆದ ನಂತರ, ರಿಷಬ್ ಶೆಟ್ಟಿ ಅವರು ಅದರ ಪೂರ್ವಕಥೆಯಾದ ‘ಕಾಂತಾರ: ಚಾಪ್ಟರ್ 1’ ನಿರ್ಮಾಣಕ್ಕೆ ಕೈ ಹಾಕಿದ್ದರು. ಈ ಚಿತ್ರವನ್ನು ರಿಷಬ್ ಶೆಟ್ಟಿಯವರೇ ಬರೆದು ನಿರ್ದೇಶಿಸಿದ್ದು, ಪ್ರಸಿದ್ಧ ಹೊಂಬಾಳೆ ಫಿಲಂಸ್ ಸಂಸ್ಥೆಯಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.

ಈ ಬಾರಿ ರಿಷಬ್ ಶೆಟ್ಟಿ ‘ಬೆರ್ಮೆ’ ಎಂಬ ಐತಿಹಾಸಿಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಾವಿರ ವರ್ಷಗಳ ಹಿಂದಿನ ಕಥಾ ಹಿನ್ನೆಲೆಯುಳ್ಳ ಈ ಚಿತ್ರವು ದೇವರು, ದೈವ, ಮತ್ತು ಆ ಕಾಲದ ಆಚರಣೆಗಳ ಕಥನವನ್ನು ಅದ್ಭುತ ರೀತಿಯಲ್ಲಿ ಚಿತ್ರಿಸಿದೆ.

ಚಿತ್ರದಲ್ಲಿ ರಿಷಬ್ ಶೆಟ್ಟಿಯ ಜೊತೆಗೆ ರುಕ್ಕಿಣಿ ವಸಂತ್, ಜಯರಾಮ್, ಗುಲ್ಮನ್ ದೇವಯ್ಯ, ರಾಕೇಶ್ ಪೂಜಾರಿ, ಪ್ರಕಾಶ್ ತುಮಿನಾಡ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ, ಚಿತ್ರವನ್ನು ರಿಲೀಸ್ ಆಗುವ ಮುನ್ನವೇ ಅಮೆಜಾನ್ ಪ್ರೈಮ್ ವಿಡಿಯೋ ಖರೀದಿಸಿತ್ತು. ವರದಿಗಳ ಪ್ರಕಾರ, 125 ಕೋಟಿ ರೂ. ಗೆ ಈ ಡಿಜಿಟಲ್ ಹಕ್ಕುಗಳನ್ನು ಪ್ರೈಮ್ ಪಡೆದುಕೊಂಡಿತ್ತು. ಈಗ ಚಿತ್ರವು ಅಕ್ಟೋಬರ್ 31ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಪ್ರೇಕ್ಷಕರು ಚಿತ್ರವನ್ನು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ. ಇನ್ನು ಈ ಕುರಿತಂತೆ ಹೊಂಬಾಳೆ ಫಿಲಂಸ್ ಸಂಸ್ಥೆಯ ಯಾವುದೆ ಅಧಿಕೃತ ಮಾಹಿತಿ ನೀಡಿಲ್ಲ.

NO COMMENTS

LEAVE A REPLY

Please enter your comment!
Please enter your name here

Exit mobile version