ಗಣೇಶ್ ರಾಣೆಬೆನ್ನೂರು
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ರಂದು ಬಹು ತಾರಾಗಣದ `45′ ಸಿನಿಮಾ ತೆರೆಕಾಣಬೇಕಿತ್ತು. ಆದರೆ ತಾಂತ್ರಿಕ ಕಾರ್ಯಗಳಿಂದ ಸಿನಿಮಾ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ 45 ಸಿನಿಮಾ ಬಿಡುಗಡೆಯನ್ನು ಡಿಸೆಂಬರ್ 25ಕ್ಕೆ ನಿಗದಿ ಮಾಡಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ.
ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾದ ರಿಲೀಸ್ ಡೇಟ್ ಮತ್ತೊಮ್ಮೆ ಅನೌನ್ಸ್ ಆಗಿದ್ದು, ಗ್ರಾಫಿಕ್ಸ್ ಕೆಲಸ ಮುಗಿಸುವ ತುರ್ತು ಚಿತ್ರತಂಡ ಹಾಗೂ ಗ್ರಾಫಿಕ್ಸ್ ತಂಡದ ಮೇಲಿದೆ. ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಡಿ ಎಂ.ರಮೇಶ್ ರೆಡ್ಡಿ ಅದ್ಧೂರಿಯಾಗಿ ನಿರ್ಮಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆರಂಭದಿಂದಲೂ ಸಾಕಷ್ಟು ಗಮನ ಸೆಳೆದಿದೆ.
ಕೆನಡಾದ ಖ್ಯಾತ MARZ ಸಂಸ್ಥೆ ಈ ಚಿತ್ರಕ್ಕೆ ವಿ.ಎಫ್.ಎಕ್ಸ್ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆ ವಿ.ಎಫ್. ಎಕ್ಸ್ ಕಾರ್ಯ ನಿರ್ವಹಿಸುತ್ತಿರುವ ಮೊದಲ ಕನ್ನಡ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಹಾಲಿವುಡ್‌ನ ಖ್ಯಾತ ತಂತ್ರಜ್ಞರು ಸಿಜಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಇಂಡಿಯಾದಲ್ಲೇ ಅತಿ ಹೆಚ್ಚು ಸಿಜಿ (ವಿ.ಎಫ್.ಎಕ್ಸ್) ಅಳವಡಿಸಲಾಗುತ್ತಿರುವ ಮೊದಲ ಚಿತ್ರ ಎಂಬ ಹೆಚ್ಚುಗಾರಿಕೆ `45′ ಚಿತ್ರಕ್ಕಿದೆ.
ಈ ಕುರಿತು MARZ ಸಂಸ್ಥೆಯ ಮುಖ್ಯಸ್ಥ ಹಾಗೂ ತಂತ್ರಜ್ಞ ಯಶ್ ಗೌಡ ಮಾತನಾಡಿದ್ದಾರೆ. `ನಮ್ಮ ಸಂಸ್ಥೆ ಸುಮಾರು ಹದಿನೈದು ವರ್ಷಗಳಿಂದ 500ಕ್ಕೂ ಅಧಿಕ ಹಾಲಿವುಡ್ ಚಿತ್ರಗಳಿಗೆ ವಿ.ಎಫ್.ಎಕ್ಸ್ ಕಾರ್ಯ ನಿರ್ವಹಿಸಿದೆ. 45 ಸಿನಿಮಾಕ್ಕೆ ನಮ್ಮ ಸಂಸ್ಥೆ ವಿ.ಎಫ್.ಎಕ್ಸ್ ಕೆಲಸ ಮಾಡುತ್ತಿರೋದು ಹೆಮ್ಮೆಯ ವಿಷಯ. ಇದು ನಮ್ಮ ಸಂಸ್ಥೆಯಲ್ಲಿ ವಿ.ಎಫ್.ಎಕ್ಸ್ ಕೆಲಸ ಮಾಡುತ್ತಿರುವ ಮೊದಲ ಕನ್ನಡ ಚಿತ್ರ. ಈ ಚಿತ್ರದಲ್ಲಿ ಗ್ರಾಫಿಕ್ಸ್ ಮಹತ್ವದ ಪಾತ್ರ ವಹಿಸಲಿದೆ.
ಗ್ರಾಫಿಕ್ ಕೆಲಸಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಸೆಪ್ಟೆಂಬರ್ 16ರ ಒಳಗೆ ವಿ ಎಫ್ ಎಕ್ಸ್ ಕಾರ್ಯ ಮುಕ್ತಾಯ ಆಗಲಿದೆ. ಆನಂತರ ಇನ್ನೊಂದು ತಿಂಗಳು ಮತ್ತಷ್ಟು ಕೆಲಸಗಳು ಇರುತ್ತವೆ. ಅಕ್ಟೋಬರ್ ವೇಳೆಗೆ ಚಿತ್ರ ಸಂಪೂರ್ಣವಾಗಿ ರೆಡಿ ಆಗಿರುತ್ತದೆ. ಚಿತ್ರ ಬಿಡುಗಡೆ ಸ್ವಲ್ಪ ತಡವಾದರೂ ಅತ್ಯುತ್ತಮ ತಂತ್ರಜ್ಞಾನದಿಂದ ಕೂಡಿರುವ ಚಿತ್ರವಾಗಿ `45′ ಮೂಡಿಬರಲಿದೆ. ಡಿ. 25ರಂದು ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಚಿತ್ರತಂಡ ಆರಾಮಾಗಿ ಪ್ರಮೋಷನ್ ಮಾಡಿಕೊಳ್ಳಬಹುದು’ ಎಂಬುದು ಯಶ್ ಗೌಡ ಅನಿಸಿಕೆ.
ಡಿಸೆಂಬರ್ 25ಕ್ಕೆ 45 ಬಿಡುಗಡೆ: ಚಿತ್ರ ನಿರ್ಮಾಕ ರಮೇಶ್ ರೆಡ್ಡಿ ಮಾತನಾಡಿ ಡಿಸೆಂಬರ್ 25ರಂದು45′ ಸಿನಿಮಾವನ್ನು ಬಿಡುಗಡೆ ಮಾಡಲಿದ್ದೇವೆ. ಸಿನಿಮಾ ಸ್ವಲ್ಪ ತಡವಾದರೂ ಅತ್ಯುತ್ತಮ ತಂತ್ರಜ್ಞಾನ, ವಿಶೇಷ ಅನುಭವದಿಂದ ಕೂಡಿರುವ ಚಿತ್ರವಾಗಿ ಮೂಡಿಬರಲಿದೆ ಎಂದಿದ್ದಾರೆ.