ಚಿತ್ರದುರ್ಗ: ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ, ನಟ ದೊಡ್ಡಣ್ಣ ಅಳಿಯ ವೀರೇಂದ್ರ ಪಪ್ಪಿ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಕರ್ನಾಟಕದ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ದಾಳಿ ನಡೆದಿದೆ.
ಶುಕ್ರವಾರ ಚಿತ್ರದುರ್ಗ, ಬೆಂಗಳೂರು ಸೇರಿದಂತೆ 17 ಕಡೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಸಕರು ಬೆಂಗಳೂರು ನಗರದಲ್ಲಿ ಇರುವ ಸಾಧ್ಯತೆ ಇದೆ. ಉದ್ಯಮಿಯೂ ಆಗಿರುವ ವೀರೇಂದ್ರ ಪಪ್ಪಿ ಕನ್ನಡದ ಹಿರಿಯ ನಟ ದೊಡ್ಡಣ್ಣ ಅಳಿಯ. ಈ ಹಿಂದೆಯೂ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿಯನ್ನು ಮಾಡಿದ್ದರು.
ಬೆಂಗಳೂರು ನಗರದ ವಸಂತ ನಗರದಲ್ಲಿರುವ ಅಪಾರ್ಟ್‌ಮೆಂಟ್, ಚಳ್ಳಕೆರೆ, ಚಿತ್ರದುರ್ಗ, ಗೋವಾದಲ್ಲಿ ದಾಳಿಯನ್ನು ಮಾಡಲಾಗಿದೆ. ಮಾಹಿತಿಗಳ ಪ್ರಕಾರ ಬೆಳಗ್ಗೆ 5.30ಕ್ಕೆ ಇಡಿ ಅಧಿಕಾರಿಗಳು ಇನ್ನೋವಾ ಕಾರುಗಳ ಮೂಲಕ ಆಗಮಿಸಿದ್ದಾರೆ. ಚಳ್ಳಕೆರೆಯಲ್ಲಿರುವ ಶಾಸಕರ ನಿವಾಸ, ಶಾಸಕರ ಸಹೋದರ ಕೆ.ಸಿ. ನಾಗರಾಜ್ ಮತ್ತು ಕೆ.ಸಿ. ತಿಪ್ಪೇಸ್ವಾಮಿ ಅವರ ಮನೆಗಳ ಮೇಲೂ ಏಕಕಾಲಕ್ಕೆ ದಾಳಿ ನಡೆದಿದೆ. ದಾಖಲೆಗಳ ಪರಿಶೀಲನೆ ಕಾರ್ಯವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.
ಶಾಸಕ ವೀರೇಂದ್ರ ಪಪ್ಪಿ ಉದ್ಯಮಿ. ಗೋವಾದಲ್ಲಿ ಅವರು ಕ್ಯಾಸಿನೋ ಸೇರಿ ಹಲವು ಉದ್ಯಮವನ್ನು ಹೊಂದಿದ್ದಾರೆ. ಈ ಉದ್ಯಮವನ್ನು ಗುರಿಯಾಗಿಸಿಕೊಂಡು ದಾಳಿಯನ್ನು ಮಾಡಲಾಗಿದೆ ಎಂಬ ಮಾಹಿತಿ ಇದೆ. ರತ್ನ ಗೇಮಿಂಗ್ ಸಲ್ಯೂಷನ್ಸ್, ರತ್ನ ಗೋಲ್ಡ್ ಕಂಪನಿ, ರತ್ನ ಮಲ್ಟಿ ಸೋರ್ಸ್ ಕಂಪನಿ, ಪಪ್ಪಿ ಟೆಕ್ನಾಲಜೀಸ್ ಕಂಪನಿ, ಪಪ್ಪಿ ಟೂರ್ಸ್ & ಟ್ರಾವೆಲ್ಸ್ ಮತ್ತು ಪಪ್ಪಿ ಬೇರ್ ಬಾಕ್ಸ್ ಸೇರಿದಂತೆ ಹಲವು ಕಂಪನಿಗಳನ್ನು ಅವರು ಹೊಂದಿದ್ದಾರೆ. ಸದ್ಯದ ಮಾಹಿತಿಗಳ ಪ್ರಕಾರ ಗೇಮಿಂಗ್ ಆ್ಯಪ್ ಸಂಬಂಧ ದಾಖಲಾಗಿದ್ದ ದೂರುಗಳ ಆಧಾರದ ಮೇಲೆ ದಾಳಿ ಮಾಡಲಾಗಿದೆ.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಚಿತ್ರದುರ್ಗ ಕ್ಷೇತ್ರದಲ್ಲಿ ಕೆ.ಸಿ.ವಿರೇಂದ್ರ ಪಪ್ಪಿಗೆ ಟಿಕೆಟ್ ನೀಡಿತ್ತು. ಚುನಾವಣೆಯಲ್ಲಿ ಅವರು 122,021 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2016ರಲ್ಲಿ ಕೆ.ಸಿ.ವೀರೇಂದ್ರ ಪಪ್ಪಿ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಆಗ ಅವರು ಜೆಡಿಎಸ್ ಪಕ್ಷದಲ್ಲಿದ್ದರು. 2023ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಅವರು ಕಾಂಗ್ರೆಸ್ ಸೇರಿದ್ದರು.
ಈ ಹಿಂದೆ ಐಟಿ ದಾಳಿ ನಡೆಸಿದಾಗ ವೀರೇಂದ್ರ ಪಪ್ಪಿ ನಿವಾಸದಲ್ಲಿ ಅಪಾರ ಪ್ರಮಾಣದ ಚಿನ್ನ, ಹಣ ಸಿಕ್ಕಿತ್ತು. ಈ ವಿಚಾರ ದೇಶಾದ್ಯಂತ ಸುದ್ದಿಯಾಗಿತ್ತು. ಅಧಿಕಾರಿಗಳು ಒಟ್ಟು 5.7 ಕೋಟಿ ಹಣವನ್ನು ಮನೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದರು. 28 ಕೆಜಿ ಬೆಳ್ಳಿ ಮತ್ತು 4 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದರು.
ಶುಕ್ರವಾರ ನಡೆದಿರುವ ಇಡಿ ದಾಳಿಯ ಕುರಿತು ಶಾಸಕ ವೀರೇಂದ್ರ ಪಪ್ಪಿ ಅಥವ ಯಾವುದೇ ಕಾಂಗ್ರೆಸ್ ನಾಯಕರು ಇನ್ನೂ ಸಹ ಪ್ರತಿಕ್ರಿಯೆ ನೀಡಿಲ್ಲ. ದಾಳಿ ಮುಗಿದ ಬಳಿಕ ದಾಳಿಯ ಕುರಿತು, ಸಿಕ್ಕಿರುವ ವಸ್ತುಗಳ ಕುರಿತು ಇಡಿ ಪ್ರಕಟಣೆ ಮೂಲಕ ಮಾಹಿತಿ ನೀಡುತ್ತದೆ.