ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ಈ ಬಾರಿ ಆತನಿಗೆ ರಾಜಾತಿಥ್ಯವಿಲ್ಲ, ಜೈಲಿನಲ್ಲಿ ನಕರ ‘ದರ್ಶನ’ವಾಗುತ್ತಿದೆ ಎಂಬುದು ಖಚಿತವಾಗುತ್ತಿದೆ.
ಬೆಂಗಳೂರು ನಗರದ 64ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ದರ್ಶನ್ ಮಂಗಳವಾರ ಹಣೆಗೆ ಕುಂಕುಮ ಹಚ್ಚಿಕೊಂಡು ವಿಚಾರಣೆಗೆ ಹಾಜರಾಗಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದ ಬಳಿಕ ಮತ್ತೆ ಜೈಲುವಾಸ ಅನುಭವಿಸುತ್ತಿರುವ ದರ್ಶನ್ ವಿಚಾರಣೆ ವೇಳೆ ತನಗೆ ವಿಷ ನೀಡುವಂತೆ ನ್ಯಾಯಾಧೀಶರನ್ನು ಮೂರು ಬಾರಿ ಕೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿಷ ಕೇಳಿದ ದರ್ಶನ್: ಕೋರ್ಟ್ ವಿಚಾರಣೆ ವೇಳೆ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳ ವಿರುದ್ಧ ದರ್ಶನ್ ಹಲವು ಆರೋಪಗಳನ್ನು ಮಾಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಲಿನಿಂದ ವಿಚಾರಣೆ ಎದುರಿಸಿದ ನಟ “ದಯವಿಟ್ಟು ನನಗೆ ವಿಷ ಕೊಡಿ. ನಾನು ಸೂರ್ಯನ ಬೆಳಕನ್ನು ನೋಡಿ ಬಹಳ ದಿನಗಳಾಗಿವೆ. ನನ್ನ ಬಟ್ಟೆಗಳು ದುರ್ವಾಸನೆ ಬೀರುತ್ತಿವೆ ಮತ್ತು ಕೈಗಳ ಮೇಲೆ ಫಂಗಸ್ ಆಗಿದೆ” ಎಂದು ಜಡ್ಜ್ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಈ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಅಂತಹ ಆದೇಶವನ್ನು ನೀಡಲು ಸಾಧ್ಯವಿಲ್ಲ ಎಂದು ದರ್ಶನ್‌ಗೆ ಸಮಾಧಾನ ಹೇಳಿದರು. ದರ್ಶನ್ ಫಂಗಸ್ ಸೋಂಕು ತಗುಲಿದೆ ಎಂದು ಹಲವು ಬಾರಿ ಪುನರುಚ್ಚರಿಸಿದರು. ಆಗ ಜೈಲಿನ ಅಧಿಕಾರಿಗಳಿಗೆ ನಾವು ಯಾವ ನಿರ್ದೇಶನ ನೀಡಬೇಕೋ ಅದನ್ನು ಕೊಡುತ್ತೇವೆ ಎಂದು ದರ್ಶನ್‌ಗೆ ಜಡ್ಜ್ ತಿಳಿಸಿದ್ದಾರೆ.
ದರ್ಶನ್ ಮತ್ತು ಇತರ ಆರೋಪಿಗಳನ್ನು ರಾಜ್ಯದ ಇತರ ಜೈಲುಗಳಿಗೆ ವರ್ಗಾಯಿಸುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ಹಾಗೂ ಹೆಚ್ಚುವರಿ ಹಾಸಿಗೆ ಮತ್ತು ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಾಲಯ ಇಂದು ಮಧ್ಯಾಹ್ನ 3 ಗಂಟೆಗೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಆದ್ದರಿಂದ ದರ್ಶನ್ ಬೇರೆ ಜೈಲಿಗೆ ಸ್ಥಳಾಂತರವಾಗಲಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ.