ಕನ್ನಡ ನಟ ಮತ್ತು ನಿರ್ದೇಶಕ ಎಸ್. ನಾರಾಯಣ್ ಕುಟುಂಬ ಸುದ್ದಿಯಲ್ಲಿದೆ. ಎಸ್. ನಾರಾಯಣ್, ಪತ್ನಿ ಭಾಗ್ಯಲಕ್ಷ್ಮೀ, ಪುತ್ರ ಪವನ್ ವಿರುದ್ಧ ಸೊಸೆ ಪವಿತ್ರಾ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ಮದುವೆಯ ನಂತರ ಹೆಚ್ಚಿನ ಹಣಕ್ಕೆ ಪೀಡಿಸಿದ್ದಾರೆ ಎಂದು ಬೆಂಗಳೂರು ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ನಿರ್ದೇಶಕ ಎಸ್. ನಾರಾಯಣ್, ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಸ್. ನಾರಾಯಣ್ ಎ-2 ಆರೋಪಿ. ಪವನ್ ಮತ್ತು ಪತ್ನಿ ಭಾಗ್ಯಲಕ್ಷ್ಮಿ ವಿರುದ್ಧವೂ ದೂರು ದಾಖಲಾಗಿದೆ.
2021ರಲ್ಲಿ ಅದ್ದೂರಿಯಾಗಿ ಪವನ್ ಮತ್ತು ಪವಿತ್ರಾ ವಿವಾಹ ನಡೆದಿತ್ತು. ಮದುವೆ ವೇಳೆ ರೂ. 1ಲಕ್ಷ ಮೌಲ್ಯದ ಉಂಗುರ ಸೇರಿದಂತೆ ಮದುವೆ ಖರ್ಚು ಪವಿತ್ರಾ ಕುಟುಂಬ ಭರಿಸಿತ್ತು. ಆದರೆ, ಮದುವೆಯ ಬಳಿಕ ಮತ್ತೆ ಹೆಚ್ಚಿನ ಹಣಕ್ಕಾಗಿ ಒತ್ತಾಯ ಮಾಡಲಾಗಿದೆ ಎಂಬುದು ದೂರು.
ಓದಿರದ ಕಾರಣ ಕೆಲಸವಿಲ್ಲದೆ ಮನೆಯಲ್ಲೇ ಪವನ್ ಇದ್ದರು. ಪವಿತ್ರಾ ಕೆಲಸ ಮಾಡಿ ಕುಟುಂಬ ಸಾಕುತ್ತಿದ್ದರು. ಈ ನಡುವೆ ಪವನ್ ಕೈಯಲ್ಲಿ ಕಾಸು ಇಲ್ಲದಿದ್ದರೂ ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಆಫ್ ಫಿಲ್ಮ್ ಇನ್‌ಸ್ಟಿಟ್ಯೂಟ್ ಪ್ರಾರಂಭಿಸಿದರು. ಅದಕ್ಕಾಗಿ ಮತ್ತೆ ಪತ್ನಿ ಪವಿತ್ರಾ ಬಳಿ ಹಣಕ್ಕೆ ಒತ್ತಾಯ ಮಾಡಿದ್ದರು ಎಂದು ತಿಳಿದುಬಂದಿದೆ.
ಪವಿತ್ರಾ ತಮ್ಮ ತಾಯಿಯ ಕೆಲವು ಒಡವೆಯನ್ನು ಕೊಟ್ಟಿದ್ದರು. ಆದರೆ, ಇನ್‌ಸ್ಟಿಟ್ಯೂಟ್ ಲಾಸ್ ಆಗಿ ಮುಚ್ಚಿತು. ಬಳಿಕ ಪವಿತ್ರಾ ಮತ್ತೆ ರೂ. 10 ಲಕ್ಷ ಸಾಲ ಮಾಡಿ ಗಂಡನಿಗೆ ನೀಡಿದ್ದರು. ಇಷ್ಟೆಲ್ಲ ಹಣ ನೀಡಿದರೂ ಸಹ ಮತ್ತೆ ಹಣ ತರುವಂತೆ ಪೀಡಿಸಿದ್ದಾರೆ. ಪತಿ ಜೊತೆಗೆ ಮಾವ ಎಸ್. ನಾರಾಯಣ್, ಅತ್ತೆ ಭಾಗ್ಯಲಕ್ಷ್ಮಿ ಮೂವರು ಪವಿತ್ರಾ ಮೇಲೆ ಹಲ್ಲೆ ಮಾಡಿ, ಹೆಚ್ಚಿನ ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎಸ್. ನಾರಾಯಣ್ ಪ್ರತಿಕ್ರಿಯೆ: ತಮ್ಮ ಮೇಲೆ ಬಂದಿರುವ ವರದಕ್ಷಿಣೆ ಕಿರುಕುಳ ಆರೋಪಕ್ಕೆ ಪ್ರತಿಕ್ರಿಯಿಸಿದ ಎಸ್. ನಾರಾಯಣ್, “ಪವಿತ್ರಾ ಮನೆ ಬಿಟ್ಟು ಹೋಗಿ 10 ತಿಂಗಳಾಗಿದೆ. ಮನೆ ಬಿಟ್ಟು ಹೋಗಿದ್ದು ಯಾಕೆ? ಎಂದು ಹೇಳಿದರೆ ನಾನು ಅವರ ಹೆಸರಿಗೆ ಮಸಿ ಬಳಿದಂತೆ ಆಗುತ್ತದೆ. ಮದುವೆ ಆಗಿ ಒಂದು ತಿಂಗಳ ಬಳಿಕ ಮಾತುಕತೆಯೇ ನಿಂತು ಹೋಯಿತು. ವಯಸ್ಸು ವ್ಯಕ್ತಿತ್ವ ಎರಡಕ್ಕೂ ಪವಿತ್ರಾ ಬೆಲೆ ಕೊಡುತ್ತಿರಲಿಲ್ಲ” ಎಂದು ಹೇಳಿದ್ದಾರೆ.