Home ಸಿನಿ ಮಿಲ್ಸ್ ಕ್ರೇಜಿ ತೀರ್ಪು

ಕ್ರೇಜಿ ತೀರ್ಪು

0

ಈ ಹಿಂದೆ ರವಿಚಂದ್ರನ್ ಅನೇಕ ಬಾರಿ ಕರಿ ಕೋಟು ತೊಟ್ಟು ನ್ಯಾಯಾಂಗ ವ್ಯವಸ್ಥೆಯನ್ನು ಪ್ರತಿನಿಧಿಸಿದ್ದಾರೆ; ತೆರೆಯ ಮೇಲೆ. ಈ ಬಾರಿಯೂ ಅವರು ಅಂಥದ್ದೇ ಲೀಗಲ್ ಸಿಸ್ಟಮ್ ಬಗ್ಗೆ ಹೇಳುವಂಥ ಚಿತ್ರವೊಂದಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ. ದ ಜಡ್ಜ್ಮೆಂಟ್ ಎಂಬ ಈ ಹೆಸರಿನ ಈ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತವಾಯ್ತು. ರವಿಚಂದ್ರನ್ ಈ ಚಿತ್ರದ ಪ್ರಧಾನ ಪಾತ್ರದಲ್ಲಿದ್ದು ದಿಗಂತ್, ಧನ್ಯ ರಾಮ್‌ಕುಮಾರ್, ಲಕ್ಷ್ಮಿ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ ಬೆಳವಾಡಿ, ರಾಜೇಂದ್ರ ಕಾರಂತ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.
ಈ ಚಿತ್ರವನ್ನು ಗುರುರಾಜ ಬಿ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದು, ಅವರು ಈ ಮೊದಲು ಅಮೃತ ಅಪಾರ್ಟ್ಮೆಂಟ್ಸ್ ಎಂಬ ಸಿನಿಮಾ ಮಾಡಿದ್ದರು. ಬೆಂಗಳೂರಿನಲ್ಲೇ ಸಂಪೂರ್ಣ ಚಿತ್ರೀಕರಣ ನಡೆಯಲಿದ್ದು, ೨೪ನೇ ತಾರೀಖಿನಿಂದ ಶೂಟಿಂಗ್ ಶುರು. ‘ಕಾನೂನು ಪ್ರಕ್ರಿಯೆಗಳು ತುಂಬಾ ಸಂಕೀರ್ಣ. ತೀರ್ಪುಗಳು ಎಲ್ಲರಿಗೂ ಸಮಾಧಾನ, ಸಂತಸ ನೀಡುತ್ತವೆ ಎಂದು ಹೇಳುವಂತಿಲ್ಲ. ಹಾಗಾದರೆ ನಮ್ಮ ಚಿತ್ರ ಯಾವ ಜಡ್ಜ್ಮೆಂಟ್ ಬಗ್ಗೆ ಮಾತಾಡುತ್ತದೆ, ಏನು ಇದರ ಹಿನ್ನೆಲೆ ಎಂಬುದು ಸಿನಿಮಾ ನೋಡಿದಾಗ ಗೊತ್ತಾಗುತ್ತದೆ’ ಎಂದರು ನಿರ್ದೇಶಕ.
‘ಚಿತ್ರದ ಕಥೆ ಚೆನ್ನಾಗಿದೆ. ನನಗೆ ಈ ಜಾನರ್‌ನ ಸಿನಿಮಾ ಅನುಭವ ಹೊಸತು. ಹೀಗಾಗಿ ಪಾತ್ರ ಒಪ್ಪಿಕೊಂಡೆ’ ಎಂದರು ರವಿಚಂದ್ರನ್. ಅನೂಪ್ ಸೀಳಿನ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಎಂ.ಎಸ್.ರಮೇಶ್ ಸಂಭಾಷಣೆ ಬರೆಯುತ್ತಿದ್ದಾರೆ. ಶಿವು ಬಿ ಕೆ ಕುಮಾರ್ ಡಿಓಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಿ೯ ಕಮ್ಯುನಿಕೇಷನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿತ್ರತಂಡದ ಬಹುತೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ಚಿತ್ರದ ಕಥಾವಸ್ತುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Exit mobile version