ವಿಭಿನ್ನ ಶೀರ್ಷಿಕೆಯ ಮೂಲಕವೇ ತೆರೆ ಮೇಲೆ ಬಂದ ಕನ್ನಡ ಸಿನಿಮಾ ‘ಸು ಫ್ರಮ್ ಸೋ’ ಸಿಕ್ಕಾಪಟೆ ಹವಾ ಕ್ರಿಯೇಟ್ ಮಾಡಿತ್ತು. ಸಾಮಾಜಿಕ ಜಾಲತಾಣ ಮತ್ತು ಮೌತ್ ಪಬ್ಲಿಸಿಟಿ ಮೂಲಕ ಚಿತ್ರ ಜನರನ್ನು ಸೆಳೆದಿತ್ತು.
ಚಿತ್ರ ನೋಡಬೇಕೆಂದು ಸಿನಿಮಾ ಥಿಯೇಟರ್‌ವರೆಗೂ ಬಂದ ಸಿನಿ ರಸಿಕರಿಗೆ ಟಿಕೆಟ್ ಸಹ ಸಿಗುತ್ತಿಲ್ಲ ಎಂದು ಸುದ್ದಿಯಾಗಿತ್ತು. ಇನ್ನು ಈ ಚಿತ್ರವನ್ನು ನೋಡಿದ ಪ್ರೇಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. BookMyShow ವೆಬ್‌ಸೈಟ್‌ನಲ್ಲಿ 9.6 ರೇಟಿಂಗ್ ಕೂಡ ಪಡೆದಿತ್ತು.
ಗಲ್ಲಾಪಟ್ಟೆಗೆಯಲ್ಲಿ 100 ಕೋಟಿ ಗಡಿ ದಾಟಿರುವ ಚಿತ್ರ ಸದ್ಯ ಮತ್ತೇ ಸುದ್ದಿಯಾಗಿದೆ. ಹಾಸ್ಯದೊಂದಿಗೆ ತುಸು ಹಾರಾರ್ ಮಿಶ್ರಣಗೊಂಡಿರುವ ‘ಸು ಫ್ರಮ್ ಸೋ’ ಚಿತ್ರಕ್ಕೆ ಓಟಿಟಿ ಹಾಗೂ ಡಿಜಿಟಲ್ ಹಕ್ಕುಗಳಿಗೂ ಬಾರೀ ಬೇಡಿಕೆ ಬಂದಿದೆ.
ಸಿನಿಮಾದ ಒಟಿಟಿ ಹಕ್ಕನ್ನು ಜಿಯೋ ಹಾಟ್‌ಸ್ಟಾರ್ ಪಡೆದುಕೊಂಡಿದೆ. ಆದರೆ ಯಾವಾಗ ಸ್ಟ್ರೀಮಿಂಗ್ ಆಗಲಿದೆ ಎಂಬ ಮಾಹಿತಿ ಪ್ರಕಟವಾಗಿಲ್ಲ. ಇನ್ನು ಕಲರ್ಸ್ ಕನ್ನಡ ಎಲ್ಲಾ ಭಾಷೆಗಳಲ್ಲಿ ಸ್ಯಾಟಲೈಟ್ ಹಕ್ಕುಗಳನ್ನು 5.5 ಕೋಟಿ + ಜಿಎಸ್‌ಟಿಗೆ ಪಡೆದುಕೊಂಡಿದೆ ಎಂದು ಮಾಹಿತಿ ಬಂದಿದೆ.
ದಾಖಲೆಯ ಮೊತ್ತಕ್ಕೆ ಹಕ್ಕು ಮಾರಾಟವಾಗಿದ್ದು, ಸದ್ಯ ಚಿತ್ರ ಇನ್ನೂ ಕೂಡ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದೆ. ಆ ಬಳಿಕ ಸ್ಟ್ರೀಮಿಂಗ್ ದಿನಾಂಕವನ್ನು ಘೋಷಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಮಲಯಾಳಂ ಮತ್ತು ತೆಲುಗಿನಲ್ಲೂ ಕೂಡ ಚಿತ್ರ ಬಿಡುಗಡೆಯಾಗಿದ್ದು, ಅಲ್ಲಿಯೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರದಲ್ಲಿ ಜಿ.ಪಿ.ತೂಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ.ತೂಮಿನಾಡು. ದೀಪಕ್ ರೈ ಪಾಣಾಜೆ, ರಾಜ್ ಬಿ.ಶೆಟ್ಟಿ ಮುಂತಾದವರು ನಟಿಸಿದ್ದಾರೆ.
ರಂಗಭೂಮಿಯಲ್ಲಿ ಪಳಗಿರುವ ಜಿ.ಪಿ.ತೂಮಿನಾಡು ತುಳು ನಾಟಕದ ಮಾದರಿಯನ್ನು ಬೆಳ್ಳಿ ಪರದೆಗೆ ತಂದಿದ್ದಾರೆ. ಒಂದು ವಠಾರದಲ್ಲಿ ನಡೆಯುವ ಕಥೆಯೇ ಸಂಪೂರ್ಣ ಚಿತ್ರವಾಗಿದೆ.
ಚಿತ್ರ ಬಿಡುಗಡೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಸಂಪೂರ್ಣ ಹಾಸ್ಯಭರಿತ ಕನ್ನಡ ಚಿತ್ರವನ್ನು ಬಹಳ ದಿನಗಳ ಬಳಿಕ ವೀಕ್ಷಣೆ ಮಾಡಿದ ಜನರು ಚಿತ್ರ ಮೆಚ್ಚಿದ್ದಾರೆ. ವಿಮರ್ಶೆಗಳು ಉತ್ತಮವಾಗಿವೆ. ಚಿತ್ರೋದ್ಯಮದ ಹಲವಾರು ಗಣ್ಯರು ಚಿತ್ರ ಗೆದ್ದ ಖುಷಿಯನ್ನು ಹಂಚಿಕೊಂಡು, ತಂಡವನ್ನು ಅಭಿನಂದಿಸುತ್ತಿದ್ದಾರೆ.