ಚೀನಾ ಮೂಲದ ಬ್ಲೇಡ್ ಆ್ಯಪ್‌ಗಳಿಗೆ ಇತಿಶ್ರೀ ಹಾಡಲು ಸಾಧ್ಯವಿಲ್ಲ ಎಂದರೆ ನೆಲದ ಕಾನೂನಿಗೆ ಬೆಲೆ ಇಲ್ಲ ಎಂದರ್ಥ. ಇದರ ದಮನಕ್ಕೆ ತುರ್ತುಕ್ರಮ ಅಗತ್ಯ.
ದೇಶದಲ್ಲಿ ಆನ್ ಲೈನ್ ಸಾಲ ಕೊಡುವ ಬ್ಲೇಡ್ ಆ್ಯಪ್ ಕಂಪನಿಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಸರ್ಕಾರ ವೀರಾವೇಶದಿಂದ ಹೇಳಿತ್ತು. ಇವುಗಳಲ್ಲಿ ಬಹುತೇಕ ಕಂಪನಿಗಳು ಚೀನಾ ಮೂಲ ಹೊಂದಿದ್ದವು. ಇವುಗಳನ್ನು ನಿಲ್ಲಿಸಲಾಗುವುದು ಎಂದು ಆರ್‌ಬಿಐ ಕೂಡ ಹೇಳಿತ್ತು. ಕೆಲವು ಕಂಪನಿಗಳು ಮುಚ್ಚಿ ಹೋದವು. ಆದರೂ ಕೆಲವು ಕಂಪನಿಗಳುಇನ್ನೂ ಜನರಿಗೆ ವಂಚನೆ ಮಾಡುವ ಕೆಲಸದಲ್ಲಿ ನಿರತವಾಗಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ತೇಜಸ್ ನಾಯರ್ ಆತ್ಮಹತ್ಯೆ ಮಾಡಿಕೊಂಡ. ಚೀನಾ ಕಂಪನಿಗಳು ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವುದಾಗಿ ಭರವಸೆ ನೀಡುತ್ತದೆ. ಎಲ್ಲವೂ ಆನ್‌ಲೈನ್ ವ್ಯವಹಾರ. ಸಾಲ ತೆಗೆದುಕೊಂಡಾಗ ಯಾರಿಗೂ ಹೇಳುವ ಅಗತ್ಯ ಬರುವುದಿಲ್ಲ. ಸಾಲ ವಸೂಲಿಗೆ ಎಲ್ಲ ವಾಮಮಾರ್ಗವನ್ನು ಕಂಪನಿ ಅನುಸರಿಸುತ್ತದೆ. ಸಾಲ ಪಡೆದವರ ಕುಟುಂಬದ ತೇಜೋವಧೆಗೂ ಸಿದ್ಧತೆ ಮಾಡಿಕೊಂಡಿರುತ್ತದೆ. ಆಗ ಸಾಲ ಪಡೆದವರು ಆತ್ಮಹತ್ಯೆಗೆ ಮೊರೆ ಹೋಗುತ್ತಾರೆ. ಈ ರೀತಿಯ ಪ್ರಕರಣಗಳು ಮಧ್ಯಪ್ರದೇಶದಿಂದ ಹಿಡಿದು ಹಲವು ರಾಜ್ಯಗಳಲ್ಲಿ ನಡೆದಿವೆ. ಮಧ್ಯಪ್ರದೇಶದಲ್ಲಿ ಅಮಿತ್ ಯಾದವ್ ಎಂಬುವರು ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂಥ ಬ್ಲೇಡ್ ಕಂಪನಿಗಳು ಈಗಲೇ ಕಾರ್ಯಾಚರಣೆ ನಡೆಸಲು ಯಾರು ಕಾರಣ ಎಂಬುದು ಸ್ಪಷ್ಟಗೊಳ್ಳಬೇಕು. ಕೇಂದ್ರ ಸರ್ಕಾರದ ಹಣಕಾಸು ಸಚಿವರು ಒಮ್ಮೆ ರಾಜ್ಯಸಭೆಯಲ್ಲಿ ಇದರ ಬಗ್ಗೆ ಗುಡುಗಿದ್ದರು. ಆಮೇಲೆ ಏನಾಯಿತೋ ತಿಳಿಯದು. ಯಾವುದೇ ಕ್ರಮ ಕಂಡು ಬರಲಿಲ್ಲ. ಆರ್‌ಬಿಐ ಕೂಡ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಪ್ರತ್ಯೇಕ ಶಾಸನ ಬೇಕಿದ್ದರೆ ಜನಪ್ರತಿನಿಧಿಗಳಿಗೆ ತಿಳಿಸಬಹುದಿತ್ತು. ಕೇವಲ ಸಾರ್ವತ್ರಿಕ ಭಾಷಣ ಮಾಡಿದವರ ಮೇಲೆ ರಾಜದ್ರೋಹದ ಪ್ರಕರಣ ದಾಖಲು ಮಾಡಿ ಜೈಲಿಗೆ ಹಾಕಲು ಕಾನೂನು ಇದೆ. ಲಕ್ಷಾಂತರ ರೂ. ವಂಚನೆ ಮಾಡುವ ವಿದೇಶಿ ಕಂಪನಿಯ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. ನಮ್ಮಲ್ಲಿ ಡಿಜಿಟಲ್ ಬ್ಯಾಂಕಿಂಗ್ ಜನಪ್ರಿಯ ಗೊಂಡಿದೆ. ಆನ್‌ಲೈನ್ ಸಾಲದ ಯೋಜನೆ ಇದೇ ವರ್ಗಕ್ಕೆ ಬರುತ್ತದೆ. ಜನ ಆಧುನಿಕ ತಂತ್ರಜ್ಞಾನ ಮಾರುಹೋಗಿ ಹಣ ಕಳೆದುಕೊಂಡ ಮೇಲೆ ಜ್ಞಾನೋದಯವಾಗಿ ಪರಿತಪಿಸಿದ ಘಟನೆಗಳು ವರದಿಯಾಗಿವೆ.
ನೆಲದ ಕಾನೂನು ಪಾಲಿಸದ ಬ್ಲೇಡ್ ಕಂಪನಿಗಳಿಗೆ ಅವಕಾಶ ಕೊಡುವುದೇ ತಪ್ಪು. ಆರ್‌ಬಿಐ ಕಟ್ಟುನಿಟ್ಟಿನ ಕ್ರಮಕೊಳ್ಳಬೇಕಿತ್ತು. ಸಹಕಾರಗಳು ಸ್ಥಳೀಯವಾಗಿ ಅವ್ಯವಹಾರ ನಡೆಸಿದರೆ ಕೂಡಲೇ ಕ್ರಮ ಕೈಗೊಳ್ಳುವ ಸಿಬಿಐ ಮತ್ತು ಇಡಿ ತನಿಖಾಸಂಸ್ಥೆಗಳು ಈ ವಿಷಯದಲ್ಲಿ ಮೌನವಹಿಸಿರುವುದಕ್ಕೆ ಕಾರಣ ತಿಳಿದು ಬರುತ್ತಿಲ್ಲ.
ಹಿಂದೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಣ್ಣ ಸಾಲ ಸುಲಭವಾಗಿ ಸಿಗುತ್ತಿತ್ತು. ಅಲ್ಲದೆ ಸಹಕಾರಿ ಪತ್ತಿನ ಸಂಘಗಳು ಸಕ್ರಿಯವಾಗಿದ್ದವು. ಈಗ ರಿಸರ್ವ್ ಬ್ಯಾಂಕ್ ಸಾಲದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ದಿನದಿಂದ ಸಹಕಾರಿ ಸಂಘಗಳು ಸಾಲ ನೀಡುವುದನ್ನು ಕಡಿಮೆ ಮಾಡಿವೆ. ಕೊರೊನಾ ಕಾಲದಲ್ಲಿಜನರಲ್ಲಿ ನಗದು ಇರಲಿಲ್ಲ. ಆಗ ಈ ಬ್ಲೇಡ್ ಕಂಪನಿಗಳಿಗೆ ಮೊರೆ ಹೋಗುವುದು ಅನಿವಾರ್ಯವಾಯಿತು. ಈಗಲೂ ಅದು ಮುಂದುವರಿದಿದೆ.
ಜನ ಕಾನೂನು ಬದ್ಧವಾಗಿ ಸಾಲ ಸಿಗುವುದು ಕಷ್ಟವಾದಾಗ ಖಾಸಗಿ ಕಂಪನಿಗಳಿಗೆ ಕೈಯೊಡ್ಡುವುದು ಸಹಜ. ಇದನ್ನು ತಪ್ಪಿಸಬೇಕು ಎಂದರೆ ಆರ್‌ಬಿಐ ಜನಸಾಮಾನ್ಯರಿಗೆ ಸುಲಭವಾಗಿ ಹಾಗೂ ಕಾನೂನುಬದ್ಧವಾಗಿ ಸಾಲ ಸಿಗುವಂತೆ ವ್ಯವಸ್ಥೆ ಮಾಡಬೇಕು. ಅಮಾಯಕರು ವಿದೇಶಿ ಬ್ಲೇಡ್ ಕಂಪನಿಗಳ ಸಾಲಕ್ಕೆ ಮರುಳಾಗಿ ಕೊನೆಗೆ ಆತ್ಮಹತ್ಯೆಗೆ ಶರಣಾಗುವುದು ಹಾಗೂ ಅದನ್ನು ಸರ್ಕಾರ ನೋಡುತ್ತ ಮೌನವಹಿಸುವುದು ಅಕ್ಷಮ್ಯ ಅಪರಾಧ. ಇದಕ್ಕೆ ಕೂಡಲೇ ಕ್ರಮ ಕೈಗೊಳ್ಳುವುದು ಆದ್ಯ ಕರ್ತವ್ಯ.
